ನಡುರಾತ್ರಿಯಲ್ಲೇ ಪ್ರತಿಭಟನೆ

ಹಾಸನ : ಗುರುವಾರ ರಾತ್ರಿ ಸತತ ನಾಲ್ಕು ಗಂಟೆಗಳ ಸುರಿದ ಭಾರೀ ಮಳೆಯಿಂದ ಕುವೆಂಪುನಗರದ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಹಾನಿ ಉಂಟು ಮಾಡಿದ್ದು, ಇದರಿಂದ ರೊಚ್ಚಿಗೆದ್ದ ನಿವಾಸಿಗಳು ನಗರಸಭೆಯ ನಿರ್ಲಕ್ಷ್ಯತೆಯನ್ನು ಖಂಡಿಸಿ ನಡು ರಾತ್ರಿಯಲ್ಲೇ ಜಿಲ್ಲಾಧಿಕಾರಿ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಅರ್ಧ ರಾತ್ರಿಯಲ್ಲೂ ಜನರ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್, ಚರಂಡಿ ಹಾಗೂ ಮನೆಗಳಲ್ಲಿ ತುಂಬಿದ್ದ ನೀರನ್ನು ತಕ್ಷಣ ಹೊರ ಎತ್ತಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು. ಕಳೆದ ೨೦ ವರ್ಷಗಳಿಂದಲೂ ಈ ಸಮಸ್ಯೆ ಜೀವಂತವಾಗಿದೆ ಎಂದು ನಿವಾಸಿಗಳಿಂದ ತಿಳಿದ ಅವರು, ದಿಗ್ಭ†ಮೆ ವ್ಯಕ್ತಪಡಿಸಿ, ಇದನ್ನು ಪರಿಹರಿಸುವತ್ತ ಚಿಂತಿಸುವುದಾಗಿ ಭರವಸೆ ಕೊಟ್ಟರು. ನಗರದ ಎಲ್ಲ ತಗ್ಗು ಪ್ರದೇಶ ಹಾಗೂ ಕಟ್ಟಿನಕೆರೆ ಮಾರುಕಟ್ಟೆಯ ಅನೇಕ ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದೆ. ಶುಕ್ರವಾರ ಬೆಳಿಗ್ಗೆ ಅಂಗಡಿ ಗಳನ್ನು ತೆರೆದ ಮಾಲೀಕರನ್ನು ಕೆರೆಯಂತೆ ನಿಂತಿದ್ದ ನೀರು ಬೆಚ್ಚಿ ಬೀಳಿಸಿತು. ಅಂಗಡಿಗಳಲ್ಲಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂ. ಬೆಲೆಯ ದಿನಸಿ ಸಾಮಾನುಗಳು ಸಂಪೂರ್ಣ ನೀರು ಪಾಲಾಗಿತ್ತು.

No Comments to “ನಡುರಾತ್ರಿಯಲ್ಲೇ ಪ್ರತಿಭಟನೆ”

add a comment.

Leave a Reply

You must be logged in to post a comment.