ಘೋರ ಆರ್ಥಿಕ ಸಮಸ್ಯೆಯಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರ ಅಮೇರಿಕ

ಕಳೆದ ಕೆಲವು ತಿಂಗಳಲ್ಲಿ ಆಮೆರಿಕದ ಹಲವಾರು ದೊಡ್ಡ ಬ್ಯಾಂಕುಗಳು ಮುಳುಗಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ತನ್ನ ಆರ್ಥಿಕ ಶ್ರೇಷ್ಠತೆ ಹಾಗು ಸ್ಥಿರತೆಯಿಂದ, ಜಗತ್ತಿನಲ್ಲೆ ಅತೀ ಬಲಿಷ್ಠ ರಾಷ್ಟ್ರ ಎಂಬ ಖ್ಯಾತಿಯೇರಿದ ಆಮೆರಿಕಾದ ಈ ಸ್ಥಿತಿ ನೊಡಿ ಆಶ್ಚರ್ಯವಾಗಿದೆ. ಈ ಧಿಢೀರ್ ಕುಸಿತಕ್ಕೆ ಏನು ಕಾರಣ ಎಂದು ವಿಷೇಶಗ್ನರಲ್ಲಿ ಪ್ರಶ್ನೆಗಳು ಮೂಡುತ್ತಿರುವಾಗ, ಸಾಮಾನ್ಯ ಜನರೂ ಕೂಡ ಅದೇ ಪ್ರಶ್ನೆಗಳನ್ನು ಕೆಳುತ್ತಿದ್ದಾರೆ. ಈ ಜಠಿಲ ಸಮಸ್ಯೆಯ ಒಂದು ಸರಳ ವಿಷ್ಲೇಷಣೆ ಸಾಮಾನ್ಯ ಜನರ ಭಾಷೆಯಲ್ಲಿ ವಿವರಿಸುವ ಪ್ರಯತ್ನ ಈ ಕೆಳಗಿದೆ.  ಈ ಸಮಸ್ಯೆಗೆ ಮೂಲ ಕಾರಣ ಸಬ್-ಪ್ರೈಮ್ ಸಾಲ ಎಂದು ನೀವು ಹಲವು ಕಡೆ ಓದಿರಬಹುದು. ಈ ಸಬ್-ಪ್ರೈಮ್ ಸಾಲ ಎಂದರೇನು – ಸಾಲವನ್ನು ವಾಪಸ್ ಮಾಡಲು ಆರ್ಥಿಕ ಸಾಮರ್ಥ್ಯ ಕಡಿಮೆ ಇರುವ ಜನರಿಗೆ, ಸಾಮಾನ್ಯಕ್ಕಿಂತ ಹೆಚ್ಚು ಬಡ್ಡಿಗೆ ಕೊಡುವ ಸಾಲವೇ ಸಬ್-ಪ್ರೈಮ್ ಸಾಲ. ಈ ವ್ಯಾಖ್ಯಾನ ಓದುತ್ತಿದ್ದ ಹಾಗೆ, ಫಅಯ್ಯೋ, ಹಂಗೆ ಸಾಲ ಕೊಟ್ಟರೆ ತೊಂದರೆ ಆಗಲ್ವೇನ್ರೀಫ ಎಂದೆನಿಸಿದರೆ, ಆಗಿದ್ದು ಅದೇ.  ಆಮೆರಿಕ ಸಾಲದ ದೇಶ. ಏನು ಕೊಳ್ಳುವುದಕ್ಕೂ ಸಾಲ ಸಿಗುತ್ತದೆ. ಜನರಲ್ಲಿ ಉಳಿತಾಯ ಮನೋಭಾವ ಕಡಿಮೆ. ಕಡಿಮೆ ಏನು, ಇಲ್ಲ ಅಂತಲೆ ಅನ್ನಬಹುದು. ಉಳಿತಾಯ ಮನೋಭಾವ ಇದ್ದವರಿಗೂ ಮೋಡಿ ಮಾಡುವಂತ ಹಲವಾರು ಆಫರ್ ಗಳು. ಕ್ಯಾಪಿಟಲಿಸಮ್ ನ (ಬಂಡವಾಲಶಹಿ) ಉತ್ತುಂಗ ಅಲ್ಲವೆ ಆ ದೇಶ. ಎಲ್ಲವೂ ಕ್ರೆಡಿಟ್ ಕಾರ್ಡಿನಲ್ಲಿ ಕೊಳ್ಳುತ್ತಾರೆ. ಭಾರತದ ಹಾಗೆ ಕಾರ್ಡಿನಲ್ಲಿ ಕೊಂಡು ಮುಂದಿನ ತಿಂಗಳು ತೀರಿಸುವುದಿಲ್ಲ. ಬರೀ ಬಡ್ಡಿ ಕಟ್ಟಿಕೊಂಡು ಹೊಗುತ್ತಾರೆ. ಕಡೆಗೆ ಕಟ್ಟಲು ಕಷ್ಟವಾದಾಗ ಜನ ದಿವಾಳಿ ಆಗುವುದು ಅಸಾಮಾನ್ಯವೇನಲ್ಲ.   ಎಲ್ಲ ಚಿಕ್ಕ ಪುಟ್ಟ ವಸ್ತುಗಳಿಗೆ ಸಿಕ್ಕುವ ಹಾಗೆ ಮನೆಗಳಿಗೂ ಸಾಲ ಸಿಗುತ್ತದೆ. ೨೦-೨೫ ವರ್ಷದ ಕಾಲಾವಧಿಯ ಸಾಲ ಸರ್ವೇಸಾಮಾನ್ಯ. ಸಾಲ ಕೊಡುವುದೇ ವ್ಯಾಪಾರವಾದ ಆಮೆರಿಕದ ಬ್ಯಾಂಕುಗಳು ಮೊದಲು ಶ್ರಿಮಂತರಿಗೆ ಮನೆ ಕೊಳ್ಳಲು ಸಾಲ ಕೊಟ್ಟವು. ಅವರಿಗೆಲ್ಲ ಕೊಟ್ಟಮೇಲೆ ಮಧ್ಯಮ ವರ್ಗದ ಒಳ್ಳೆ ಸಂಬಳವುಳ್ಳ ಜನರಿಗೆ ಸಾಲ ಕೊಟ್ಟರು. ಹೀಗೆ ವ್ಯವಹಾರವನ್ನು ಹೆಚ್ಚು ಹೆಚ್ಚು ವಿಸ್ತರಿಸಲು ಬರುತ್ತಾ ಬರುತ್ತಾ ಕಡಿಮೆ ಆದಾಯದ ಜನರಿಗೂ ಕೊಡಲು ಶುರು ಮಾಡಿದವು. ಹೀಗೆ ಯಾರಿಗೆ ಬೇಕಾದರು ಸಾಲ ಸಿಗುವುದು ಸುಲಭವಾಯಿತು. ಕೆಳ-ಆದಾಯದ ವರ್ಗದವರಿಗೆ ಬಡ್ಡಿ ಸ್ವಲ್ಪ ಹೆಚ್ಚು ಅಷ್ಟೆ. ಎಲ್ಲರೂ ಬಾಡಿಗೆ ಬಿಟ್ಟು ಸ್ವಂತ ಮನೆ ಮಾಡುವುದರ ಕಡೆಗೆ ವಾಲಿದರು. ಸಾಲಕ್ಕೆ ಕಟ್ಟಬೇಕಾದ ಕಂತು ಹೆಚ್ಚುಕಡಿಮೆ ಬಾಡಿಗೆಗೆ ಸಮಾನವಾದರೆ ಯಾರು ತಾನೆ ಬಾಡಿಗೆ ಕೊಟ್ಟು ಇರುವರು.   ಆಮೆರಿಕಾದ ಸರ್ಕಾರ ಇದಕ್ಕೆ ಫಪ್ರೇರಣೆಫ ಕೊಡದಿದ್ದರೂ, ಮುಖ ತಿರುಗಿಸಿದ್ದು ಹೌದು. ತನ್ನ ದೇಶದ ಪ್ರತಿಯೊಬ್ಬ ಪ್ರಜೆಯೂ ಕನಸಿನ ಮನೆ ಕಟ್ಟಬಹುದಾದ ಪರಿಸ್ಥಿತಿ ನಿರ್ಮಾಣವಾದರೆ ಯಾವ ಸರ್ಕಾರ ತಾನೆ ಬೇಡ ಎನ್ನುವುದು. ಹೀಗೆ ಸಾಲ ಸುಲಭವಾಗಿ ಸಿಗುವ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಜನ ಸಾಲ ತೆಗೆದು ತಮ್ಮ ತಿಂಗಳ ಸಂಬಳದ ಹೆಚ್ಚು ಭಾಗ ಮನೆಯ ಕಂತಿನ ಕಡೆಗೆ ಹಾಕ ತೊಡಗಿದರು. ಇದರಿಂದ ಮನೆಗಳ ಬೇಡಿಕೆ ಹೆಚ್ಚಾಯಿತು. ಬೇಡಿಕೆ ಹೆಚ್ಚಾದಾಗ, ಮನೆಗಳ ಬೆಲೆ ಕೂಡ ಏರಿತು. ಹೀಗೆ ಮನೆಗಳ ಬೆಲೆ ಮೇಲೇರಿ ಹೊಗುತ್ತಿದ್ದರಿಂದ ಬ್ಯಾಂಕುಗಳು ಸಾಲ ಕೊಡುವುದಕ್ಕೆ ಹಿಂಜರಿಯಲಿಲ್ಲ. ಮನಯೇ ತಮ್ಮ ಸಾಲಕ್ಕೆ ಗ್ಯಾರಂಟೀ (ಜಾಮೀನು) ಆದ್ದರಿಂದ ಸಾಲ ತೀರಿಸದಿದ್ದರೆ ಮುಟ್ಟುಗೊಲು ಹಾಕಿಕೊಳ್ಳುವುದಕ್ಕೆ ಮನೆ ಇದ್ದೆ ಇತ್ತಲ್ಲ. ಹೀಗೆ ಸಾಕಷ್ಟು ವರ್ಷಗಳು ಎಲ್ಲವೂ ಚೆನ್ನಗಿ ನೆಡೆದುಕೊಂಡೇ ಬಂದಿತು.   ಆದರೆ ಇದರಲ್ಲಿ ಒಂದು ಮೂಲ ಸಮಸ್ಯೆ ಇತ್ತು. ಮನೆಗಳ ಬೆಲೆ ಕೆಳಗೆ ಬೀಳಬಹುದು ಎಂದು ಯಾರೂ ಉಹಿಸಿರಲಿಲ್ಲ. ಸಾಲ ತೆಗೆದುಕೊಂಡ ಸಾಕಷ್ಟು ಜನರಿಗೆ ಅದನ್ನು ತೀರಿಸುವ ಶಕ್ತಿ ಇಲ್ಲದಿದ್ದರೂ, ಅದು ಅವರಿಗೆ ಮೊದಲ ವರ್ಷಗಳಲ್ಲಿ ಅರ್ಥವಾಗಲಿಲ್ಲ. ಗ್ರಾಹಕರನ್ನು ಸೆಳೆಯಲು ಬ್ಯಾಂಕುಗಳು ಮೊದಲ ಕೆಲವು ವರ್ಷ ಕಡಿಮೆ ಕಂತುಗಳ ಆಫ಼ರ್ ಗಳನ್ನೂ ಕೂಡ ಕಲ್ಪಿಸಿದ್ದವು. ಮೊದಲ ವರ್ಷಗಳ ಸುಲಭ ಕಂತು ಮುಗಿದ ಮೇಲೆ ಸಾಲ ಹೊರೆಯಾಯಿತು. ಇದರ ಜೊತೆಗೆ ಸಾಮಾನ್ಯ ಬಡ್ಡಿ ದರ ಮೆಲಕ್ಕೆ ಹೊದಾಗ, ಕಂತು ಇನ್ನಷ್ಟು ಮೇಲೇರಿ ಸಾಲ ತೀರಿಸಲು ಕಷ್ಟವಾಯಿತು. ಭಾರ ತಡೆಯಲಾಗದಾಗ ಡೀಫಾಲ್ಟ್ (ಕಂತು ಕಟ್ಟದೇ ಇರುವುದು) ಮಾಡುವುದಕ್ಕೆ ಶುರು ಮಾಡಿದರು. ಬ್ಯಾಂಕುಗಳು ಮುಟ್ಟೊಗೊಲು ಹಾಕಿ ದುಡ್ಡು ವಸೂಲಿ ಮಾಡಿದವು. ಬ್ಯಾಂಕುಗಳು ಸಿಕ್ಕಿದವರಿಗೆಲ್ಲಾ ಸಾಲ ಕೊಟ್ಟು ಕಲ್ಪಿಸಿದ್ದ ಈ ಕೃತಕ ಬೇಡಿಕೆ ಕರಗಲು ಶುರುವಾಯಿತು. ಮುಟ್ಟುಗೋಲು ಮನೆಗಳು ಮಾರುಕಟ್ಟೆಗೆ ಬಂದು ಮನೆಗಳ ಸರಬರಾಜು ಕೂಡ ಹೆಚ್ಚಾಯಿತು. ಬೇಡಿಕೆ ಕಡಿಮೆಯಾಗಿ ಸರಬರಾಜು ಹೆಚ್ಚಾದಾಗ ರಿಯಲ್ ಎಸ್ಟೇಟ್ ಬೆಲೆ ಕುಸಿಯಲು ಪ್ರಾರಂಭವಾಯಿತು.   ಕೆಲವು ಕಡೆಯಂತೂ ಶೇಖಡ ಇಪ್ಪತ್ತರಿಂದ ಐವತ್ತರವರೆಗೆ ಬೆಲೆ ಕುಸಿಯಿತು. ತಮ್ಮ ಮನೆಯ ಬೆಲೆ ಬಾಕಿ ಉಳಿದಿರುವ ಸಾಲಕ್ಕಿಂತ ಕಡಿಮೆ ಆದರೆ ಯಾರು ತಾನೆ ಸಾಲ ಕಟ್ಟುತ್ತರೆ? ಇದರಿಂದ ಇನ್ನಷ್ಟು ಜನ ಸಾಲ ಕಟ್ಟುವುದು ನಿಲ್ಲಿಸಿದರು. ಹೆಚ್ಚು ಹೆಚ್ಚು ಜನ ಹೀಗೆ ಮಾದುತ್ತಿದ್ದ ಹಾಗೆ ಬೆಲೆ ಕೂಡ ಹೆಚ್ಚು ಹೆಚ್ಚು ಕೆಳಗೆ ಬಂತು. ಇದರಿಂದ ಬ್ಯಾಂಕುಗಳು ಉಳಿದ ಸಾಲಕ್ಕಿಂತ ಕಡಿಮೆ ದರದಲ್ಲಿ ಮುಟ್ಟುಗೋಲು ಹಾಕಿ ದೊಡ್ಡ ದೊಡ್ಡ ನಷ್ಟ ಅನುಭವಿಸಿದವು. ಕಡೆಗೆ ಕುಸಿದು ಬಿದ್ದವು. ಈ ಕೃತಕ ಗುಳ್ಳೆಯ ಒಡೆಯುವ ಬಗ್ಗೆ ಹಲವು ವರ್ಷಗಳಿಂದ ಜಗತ್ತಿನ ಪ್ರಸಿದ್ಧ ಆರ್ಥಿಕ ತಗ್ನ್ಯರು ವಿಶ್ಲೇಷಣೆ ನೆಡೆಸಿ ಎಚ್ಚರಿಕೆ ಕೊಡುತ್ತಲೇ ಇದ್ದರು. ಕಡೇಗೂ ಅವರ ಭವಿಷ್ಯ ವಾಣಿ ನಿಜವಾಗಿ ಕನಸಿನ ಗುಳ್ಳೆ ಒಡೆದಾಗ ಅಮೆರಿಕಾದ ದಿಗ್ಗಜ ಬ್ಯಾಂಕುಗಳಲ್ಲಿ ಕೆಲವೇ ಉಳಿದಿದ್ದವು.   ಆದರೆ ರೀಟೈಲ್ ಬ್ಯಾಂಕುಗಳು (ಗ್ರಾಹಕರಿಗೆ ಉಳಿತಾಯ ಖಾತೆ ಹಾಗು ಸಾಲ ಕೊಡುವ ಬ್ಯಾಂಕುಗಳು. ಉದಾ: ಎಸ್ ಬಿ ಐ,  ಐ ಸಿ ಐ ಸಿ ಐ ಇತರೆ) ಯಾಕೆ ಮುಳುಗಲಿಲ್ಲ? – ರೀಟೈಲ್ ಬ್ಯಾಂಕುಗಳು ತಮ್ಮ ಸಾಲದ ಅಪಾಯವನ್ನು ಕಡಿಮೆ ಮಾಡಲು, ಸಾಲಗಳನ್ನು ಕಂತೆ ಮಾಡಿ (ಶೇರುಗಳಂತ ಪತ್ರಗಳಾಗಿ ಪರಿವರ್ತಿಸಿ) ಮಾರುಕಟ್ಟೆಯಲ್ಲಿ ಮಾರಿದ್ದವು. ಇದು ಜಗತ್ತಿನಾದ್ಯಂತ ಸಾಮಾನ್ಯ ಆಚರಣೆ. ಈ ಸಾಲದ ಕಂತೆಗಳಿಗೆ ಸಿ ಡಿ ಒ (ಕೊಲ್ಲಾಟರಲೈಜ್ಡ್ ಡೆಟ್ ಆಬ್ಲಿಗೇಶನ್) ಎನ್ನುತ್ತಾರೆ. ಅಮೆರಿಕಾದ ಇನ್ವೆಸ್ಟ್ಮೆಂಟ್ ಬ್ಯಾಂಕುಗಳು (ಗ್ರಾಹಕರ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡುವ ಬ್ಯಾಂಕುಗಳು) ಈ ಸಾಲಗಳನ್ನು ಮೇಲ್ಬಿದ್ದು ಕೊಂಡವು. ತಮ್ಮ ಸಾಲ ಕಡೆಗೆ ಬೆರೆಯವರ ಸಮ್ಸಸ್ಯೆಯಾದ್ದರಿಂದ, ರೀಟೈಲ್ ಬ್ಯಾಂಕುಗಳು ಸಾಲ ಕೊಡುವಾಗ ತುಂಬ ತಲೆ ಕೆಡಿಸಿಕೊಳ್ಳಲಿಲ್ಲ. ಸಾವಿರಾರು ಕೊಟಿ ದಾಲರ್ ಗಳ ಸಾಲವನ್ನು ಕೊಂಡಿದ್ದ ಇನ್ವೆಸ್ಟ್ಮೆಂಟ್ ಬ್ಯಾಂಕುಗಳು ಭಾರೀ ನಷ್ಟ ಅನುಭವಿಸಿ ತೊಂದರೆಯಲ್ಲಿ ಸಿಕ್ಕಿಕೊಂಡವು. ಇದ್ದ ತೊಂದರೆಗಿಂತ ವದಂತಿ ಬಹಳ ದೊಡ್ಡದಾಗಿತ್ತು. ತಮ್ಮ ಹೂಡಿಕೆ ನಷ್ಟವಾಗುತ್ತಿರುವುದನ್ನು ನೊಡಿ ಜನರು ಗಾಬರಿಗೊಂಡು ತಮ್ಮ ದುಡ್ಡು ವಾಪಸ್ಸು ಪಡೆಯಲು ತಮ್ಮ ಇನ್ವೆಸ್ಟ್ಮೆಂಟ್ ಬ್ಯಾಂಕುಗಳಿಗೆ ಮುನ್ನುಗ್ಗಿದರು. ಜನರಿಗೆ ದುಡ್ಡು ವಾಪಸ್ಸು ಕೊಡಬೇಕಾಗಿ, ಶೇರು ಮಾರುಕಟ್ಟೆಯ ಹೂಡಿಕೆ ಮಾರಬೆಕಾಯಿತು. ಇದರಿಂದ ಶೇರು ಮಾರುಕಟ್ಟೆ ಕೂಡ ಕುಸಿಯಿತು. ಅಮೆರಿಕಾದ ರಿಯಲ್ ಎಸ್ಟಟ್ ಹಾಗು ಶೇರು ಮಾರುಕಟ್ಟೆಯಲ್ಲಿ ಹಲವಾರು ವಿದೇಶಿ ಕಂಪನಿಗಳೂ ಹೂಡಿಕೆ ಮಾಡಿ ಕೈ ಸುಟ್ಟುಕೊಂಡವು. ತಮ್ಮ ಚೊಕ್ಕ ಬ್ಯಾಂಕಿಂಗ್ ಗೆ ಹೆಸರಾಗಿದ್ದ ಸ್ವಿಸ್ ಬ್ಯಾಂಕುಗಳು ಕೂಡ ಇದರಿಂದ ಹೊರಗುಳಿಯಲಿಲ್ಲ. ಅಲ್ಲದೇ ಹಲವಾರು ಯುರೋಪಿಯನ್ ದೇಶಗಳು ತಮ್ಮದೇ ಆದ ರಿಯಲ್ ಎಸ್ಟಟ್ ತೊಂದರೆ ಅನುಭವಿಸುತ್ತಿದ್ದವು.   ಗೋಲ್ಡ್ಮನ್ ಸಾಕ್ಸ್ ಎಂಬ ಬ್ಯಾಂಕು ಒಂದು ಬಿಟ್ಟು ಬೆರೆ ಎಲ್ಲಾ ಬ್ಯಾಂಕುಗಳೂ ಈ ಸಿ ದಿ ಓ ಹೂಡಿಕೆಯಿಂದ ಭಾರೀ ನಷ್ಟ ಅನುಭವಿಸಿದವು. ಜಗತ್ತಿನ ಅತೀ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿದ್ದ ಫಬೇರ್ ಸ್ಟರ್ನ್ಸ್ಫ ಎಂಬ ಬ್ಯಾಂಕು ಮೂರೆ ದಿನಗಳಲ್ಲಿ ಕಡ್ಲೆಕಾಯಿ ಬೆಲೆಗೆ ಫಜೆ ಪಿ ಮೋರ್ಗನ್ಫಗೆ ಮಾರಾಟವಾಯಿತು. ವರುಷದ ಹಿಂದೆ ೧೭೦ ಡಾಲರ್ ಇದ್ದ ಬೇರ್ ನ ಶೇರು, ಮಾರಾಟವಾದಾಗ ಬೆಲೆ ೨ ಡಾಲರ್ ಗೆ ಕುಸಿದಿತ್ತು. ಆ ಬೆಲೆಗೂ ಕೊಳ್ಳಲು ಯಾವು ಬ್ಯಾಂಕೂ ಮುಂದಾಗದಿದ್ದಾಗ ಅಮೇರಿಕಾ ಸರ್ಕಾರ ತಾನೆ ಗ್ಯಾರಂಟಿ ನಿಲ್ಲಬೇಕಾಯಿತು. ಸಾವಿರಾರು ಜನ ಕೆಲಸವನ್ನೂ ಕಳೆದುಕೊಂಡರು. ಬೇರ್ ಮುಳುಗಿದ ಮೇಲೆ, ಸಮಸ್ಯೆ ನಿರಂತರವಾಗಿ ಉಲ್ಬಣಗೊಳ್ಳುತ್ತಾ ಹೋಗಿ ದೊಡ್ಡ ದೊಡ್ಡ ಬ್ಯಾಂಕುಗಳು ಒಂದರ ಹಿಂದೆ ಒಂದಂತೆ ಬಿದ್ದವು. ಕೆಲವು ವಾರಗಳ ಹಿಂದೆ ಬಿದ್ದ ಲೀಮನ್ ಬ್ರದರ್ಸ್ ನೀಲಾಮು ಘೋಷಣೆ ಮಾಡಿದ ಮೇಲೆ ಆ ಬ್ಯಾಂಕಿನಲ್ಲಿ ಉಳಿದಿದ್ದ ಆಸ್ಥಿ ೬೦೦ ಬಿಲಿಯನ್ ಡಾಲರ್. ಅಂದರೆ ಇಡೀ ಭಾರತದ ಒಂದು ವರ್ಷದ ಉತ್ಪತ್ತಿಯ ಅರ್ಧಕ್ಕೆ ಸಮಾನ. ದೊಡ್ಡ ಬ್ಯಾಂಕು ಎಂದರೆ ಎಷ್ಟು ದೊಡ್ಡದೆಂದು ಈಗ ತಿಳಿಯಬಹುದು. ಇಂತಹ ಹಲವಾರು ಬ್ಯಾಂಕುಗಳು ಮುಳುಗಿದರೆ ಎಷ್ಟು ದೊಡ್ಡ ಸಮಸ್ಯೆ ಆಗಬಹುದು ಎಂದೂ ಅರ್ಥ ಮಾಡಿಕೊಳ್ಳಬಹುದು.   ವ್ಯವಹಾರದಲ್ಲಿ ಲಾಭ ನಷ್ಟ ಇದ್ದಿದ್ದೇ. ಬ್ಯಾಂಕುಗಳು ನಶ್ಟ ಅನುಭವಿಸಿದರೆ ಬೆರೆ ಎಲ್ಲರಿಗೂ ಏಕೆ ತೊಂದರೆಯಾಗಬೇಕು? – ಬ್ಯಾಂಕುಗಳು ದೊಡ್ಡ ನಷ್ಟ ಅನುಭವಿಸಿದ್ದರಿಂದ ಜನರಿಗೆ ಸಾಲ ಕೊಳ್ಳಲು ತೊಂದರೆಯಾಗಿದೆ. ಸಾಲದಿಂದಲೆ ನೆಡೆಯುವ ಅಮೇರಿಕಾದ ಜನ ತಮ್ಮ ಖರ್ಚುಗಳನ್ನು ಆದಷ್ಟು ಕಡಿಮೆ ಮಾಡುತ್ತಿದ್ದಾರೆ. ಇದರಿಂದ ಬೇರೆ ವ್ಯಾಪಾರಗಳಿಗೆ ವ್ಯಾಪಾರ ಕಡಿಮೆಯಾಗಿದೆ. ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಅಮೆರಿಕಾಗೆ ರಫ಼್ತು ಮಾಡುತ್ತಿದ್ದ ದೇಶಗಳು ಕೂಡ ಕೊಳ್ಳೂವವರು ಕಡಿಮೆಯಾಗಿ ತೊಂದರೆ ಅನುಭವಿಸುತ್ತಿದ್ದಾವೆ. ಇದಕ್ಕೆ ಭಾರತವೂ ಹೊರತಲ್ಲ. ವಿದೇಶಿ ಬ್ಯಾಂಕುಗಳು ತಮ್ಮ ಮನೆ ಸಮಸ್ಯೆ ಬಗೆಹರಿಸಲು ಭಾರತದ ಶೇರು ಮಾರುಕಟ್ಟೇಯಲ್ಲಿ ಹೂಡಿದ್ದ ಬಂಡವಾಳವಾನ್ನು ಹಿಂತೆಗೆಯುತ್ತಿದ್ದಾವೆ. ಇದರಿಂದ ಭಾರತದ ಶೇರು ಮಾರುಕಟ್ಟೆ ಕೂಡ ಕುಸಿದು ಮೂರು ವರ್ಷ ಇದ್ದ ಮಟ್ಟಕ್ಕೆ ಬಂದಿದೆ. ಐ ಟಿ ಸಂಸ್ಥೆಗಳ ಬಿಸಿನೆಸ್ ಮೇಲೆ ಕೂಡ ಪರಿಣಾಮ ಬೀರಿದೆ. ಭಾರತದ ಬ್ಯಾಂಕುಗಳು ಕಠಿಣ ನಿಭಂದನೆಗಳಿಗೆ ಒಳಗಾಗಿರುವುದರಿಂದ ಅಷ್ಟು ತೊಂದರೆಗೆ ಒಳಗಾಗದಿರುವುದು ಸಂತಸದ ವಿಷಯ. ಆದರೆ ಸರ್ಕಾರ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.   ಮೇಲೆ ಬರೆದ ಸಾಕಷ್ಟು ವಿಷಯಗಳು ಸಾಮಾನ್ಯ ಓದುಗರಿಗೆ ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಬೇಜಾರು ಮಾಡಿಕೊಳ್ಳುವ ಅವಷ್ಯಕತೆ ಇಲ್ಲ. ಈ ಮೇಲಿನ ಕೆಲವು ವಿಷಯಗಳು ಪ್ರಪಂಚದ ಮಾನ್ಯ ಆರ್ಥಿಕ ವಿಷೇಶಗ್ನರಿಗೂ ಸೂಕ್ತ ಸಮಯಕ್ಕೆ ಅರ್ಥ ಮಾಡಿಕೊಳ್ಳಲಾಗದಿರುವುದೇ ಇಂದಿನ ಘೋರ ಸಮಸ್ಯೆಗೆ ಕಾರಣವಾಗಿರುವುದು ಗಮನೀಯ. ಸಾಲವನು ಕೊಂಡಾಗ ಹಾಲೋಗರುಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ – ಅರ್ಜುನ. ದೇವ

No Comments to “ಘೋರ ಆರ್ಥಿಕ ಸಮಸ್ಯೆಯಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರ ಅಮೇರಿಕ”

add a comment.

Leave a Reply

You must be logged in to post a comment.