ಸ್ವೀಪ್ ಕನಸು ಭಗ್ನ ; ೪-೧ ರಿಂದ ಸರಣಿ ಭಾರತದ ವಶ

ಕೊಲಂಬೋ : ತಿಲಕರತ್ನ ದಿಲ್ಶಾನ್ (೯೭) ಮತ್ತು ಕುಮಾರ ಸಂಗಕ್ಯರ (೮೪) ನೆರವಿನಿಂದ ಭಾರತದ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿದೆ. ಭಾರತದ ಪರ ಯುವರಾಜ್ (೭೩), ಧೋನಿ (೫೩) ಮತ್ತು ರವೀಂದ್ರ ಜಡೇಜಾ (೬೦) ಅರ್ಧ ಶತಕ ಗಳಿಸಿದರಾದರೂ ಪಂದ್ಯವನ್ನು ಗೆಲ್ಲಲಾಗಲಿಲ್ಲ. ಸರಣಿ ಕ್ಲೀನ್ ಸ್ವೀಪ್ ಮಾಡುವ ಕನಸಿಗೆ ಧಕ್ಕೆಯೊದಗಿದ್ದರಿಂದ ೪-೧ಕ್ಕೆ ಟೀಮ್ ಇಂಡಿಯಾ ತೃಪ್ತವಾಗಿದೆ. ಐದು ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ಕೊಲಂಬೋದ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಶ್ರೀಲರಂಕಾ ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್ ಕಳೆದುಕೊಂಡು ೩೨೦ ದಾಖಲಿಸಿತ್ತು. ಆದರೆ ಇದನ್ನು ಬೆನ್ನತ್ತಲಾರಂಭಿಸಿದ ಭಾರತ ಅಲ್ಪ ಮೊತ್ತಕ್ಕೆ ಕುಸಿದುದಲ್ಲದೆ, ನಂತರವೂ ಯಾವೊಂದು ದಾಂಡಿಗರೂ ಮಹತ್ವದ ಆಸರೆ ಯಾಗದ ಕಾರಣ ೬೮ ರನ್ಗಳ ಸೋಲುಂಡಿದೆ. ಸತತ ೯ ಏಕದಿನ ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿದ್ದ ಮಹೇಂದ್ರಸಿಂಗ್ ಧೋನಿ ಅದನ್ನು ೧೦ಕ್ಕೇರಿಸುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಆಸೆಯೂ ಬತ್ತಿ ಹೋಗಿದೆ. ಸರಣಿಯ ಐದು ಏಕದಿನಗಳ ಪೈಕಿ ನಾಲ್ಕನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು. ಆಕ್ರಮಣಕಾರಿ ಆಟವಾಡಿ ಲಂಕಾಕ್ಕೆ ಆಸರೆಯಾಗಿದ್ದ ಕುಮಾರ ಸಂಗಕ್ಯರ ಪಂದ್ಯ ಪುರುಷೋತ್ತಮ ಹಾಗೂ ಸರಣಿಯುದ್ದಕ್ಕೂ ತೋರಿದ ಅದ್ಭುತ ಪ್ರದರ್ಶನಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಪಾಲಾಗಿದೆ. ಭಾರತದ ಪರ ಇಂದು ಅರ್ಧಶತಕ ದಾಖಲಿಸಿ ತಂಡದ ಮಾನ ಉಳಿಸಿದವರು ಯುವರಾಜ್ ಸಿಂಗ್ (೭೩), ನಾಯಕ ಧೋನಿ (೫೩) ಮತ್ತು ರವೀಂದ್ರ ಜಡೇಜಾ (೬೦*) ಮಾತ್ರ. ಉಳಿದಂತೆ ಎರಡಂಕಿ ದಾಖಲಿಸಲೂ ವಿಫಲವಾದವರು ವೀರೇಂದ್ರ ಸೆಹ್ವಾಗ್ (೬), ಸುರೇಶ್ ರೈನಾ (೦), ಯೂಸುಫ್ ಪಠಾಣ್ (೩), ಇರ್ಫಾನ್ ಪಠಾಣ್ (೮), ಬಾಲಾಜಿ (೭) ಮತ್ತು ಇಶಾಂತ್ ಶರ್ಮಾ (೪), ಗೌತಮ್ ಗಂಭೀರ್ (೧೩) ಆರಂಭದಲ್ಲೇ ಎಡವಿ ನಿರಾಸೆ ಮೂಡಿಸಿದರು. ರೋಹಿತ್ ಶರ್ಮಾ (೧೫) ಆಸರೆಯಾಗುವರೆಂಬ ನಿರೀಕ್ಷೆಯೂ ಸುಳ್ಳಾಯಿತು. ಲಂಕಾ ಪರ ಕುಲಶೇಖರ, ಮುರಳೀಧರನ್, ಮೆಂಡಿಸ್ ತಲಾ ಎರಡೆರಡು, ತುಷಾರ, ಮಹರೂಫ್, ಜಯಸೂರ್ಯ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಭಾರತ ೪೮.೫ ಓವರುಗಳಲ್ಲಿ ೨೫೨ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿದ್ದು, ೬೮ ರನ್ಗಳ ಸೋಲುಂಡಿದೆ. ಇದಕ್ಕೂ ಮೊದಲು ಶ್ರೀಲಂಕಾ ತನ್ನ ಅದ್ಭುತ ಬ್ಯಾಟಿಂಗ್ ಲಯ ಕಂಡುಕೊಂಡು ಇಶಾಂತ್ ಶರ್ಮಾ, ಯುವರಾಜ್ ಸಿಂಗ್ ದಾಳಿಯ ಹೊರತಾಗಿಯೂ ತಿಲಕರತ್ನ ದಿಲ್ಶಾನ್ (೯೭) ಮತ್ತುಕುಮಾರ ಸಂಗಕ್ಯರ (೮೪) ನೆರವಿನಿಂದ ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೩೨೦ ರನ್ ಪೇರಿಸಿತ್ತು. ಲಂಕಾ ಆರಂಭಿಕ ಆಟಗಾರರಾದ ಜಯಸೂರ್ಯ ಮತ್ತು ದಿಲ್ಶಾನ್ ದಿಟ್ಟ ಪ್ರದರ್ಶನದಿಂದ ಕೊನೆಯ ಪಂದ್ಯದಲ್ಲಿ ತಿರುಗಿ ಬೀಳುವ ಲಕ್ಷಣ ತೋರಿಸಿದ್ದರು. ೧೦ ಓವರುಗಳವರೆಗೆ ಯಾವುದೇ ಬೌಲರುಗಳ ಮೇಲೆ ನಿಯಂತ್ರಣ ಸಾಧಿಸಿದಈಜೋಡಿ ೬೬ ರನ್ ಕಲೆ ಹಾಕಿತ್ತು ಅಷ್ಟರಲ್ಲಿ ಜಯಸೂರ್ಯರಿಗೆ ಕನ್ನ ಕೊರೆದವರು ಇರ್ಫಾನ್ ಪಠಾಣ್. ಜಯಸೂರ್ಯ ಆಗ ೩೭ ರನ್ ದಾಖಲಿಸಿದ್ದರು. ನಂತರ ಸುಮಾರು ೨೦ ಓವರು ಗಳಷ್ಟು ಕಾಲ ಮೆರೆದಾಡಿದ್ದು, ದಿಲ್ಶಾನ್ ಮತ್ತು ಸಂಗಕ್ಯರ, ಈ ಜೋಡಿ ಎರಡನೇ ವಿಕೆಟ್ಗೆ ತಮ್ಮ ೨೨.೪ ಓವರುಗಳಲ್ಲಿ ೧೪೩ ರನ್ಗಳ ಭಾಗೀದಾರಿಕೆ ಒದಗಿಸಿತು. ಆ ಮೂಲಕ ಲಂಕಾಕ್ಕೆ ಭದ್ರ ಅಡಿಪಾಯ ಇವರಿಂದಲೇ ಬಂತು. ಶತಕದಂಚಿ ನಲ್ಲೇ ಎಡವಿದ್ದು ಮಾತ್ರ ಲಂಕಾ ಪಾಲಿಗೆ ದುರದೃಷ್ಟಕರ, ಆದರೂ ಸಾಕಷ್ಟು ಮೊತ್ತ ಪೇರಿಸಿದ್ದ ಕಾರಣ ಉಳಿದ ಆಟಗಾರರ ಮೇಲಿನ ಒತ್ತಡ ತುಸು ಮಟ್ಟಿಗೆ ಕಡಿಮೆಯಾಗಿತ್ತು. ಸಂಗಕ್ಯರ ೮೪ ರನ್ ಗಳಿಸಿದಾಗ ಯುವರಾಜ್ಗೆ ವಿಕೆಟ್ ಒಪ್ಪಿಸಿದ್ದರು. ದಿಲ್ಶಾನ್ ಜೊತೆ ಸೇರಿದ ಕಂದಾಂಬಿ ಉತ್ತಮ ಸಾಥ್ ನೀಡುತ್ತಿದ್ದರು. ಲಂಕಾ ಹಠಾತ್ ಕುಸಿದದ್ದು ೪೦ನೇ ಓವರಿನ ನಂತರ. ೪೧.೨ ನೇ ಓವರಿನಲ್ಲಿ ಕಂದಾಂಬಿ (೨೬), ೪೧.೩ ರಲ್ಲಿ ದಿಲ್ಶಾನ್ (೯೭), ೪೨ ರಲ್ಲಿ ಜಯವರ್ಧನ್ (೧) ಬೆನ್ನು ಬೆನ್ನಿಗೆ ವಿಕೆಟ್ ಕಳೆದು ಕೊಂಡರು. ಇಲ್ಲಿ ಕಂದಾಂಬಿ, ಕಪುಗೇದದ ವಿಕೆಟ್ ಇಶಾಂತ್ ಶರ್ಮಾ ಪಡೆದರೆ, ಜಯವರ್ಧನೆ ಯನ್ನು ಎರಡನೇ ಬಲಿಯಾಗಿ ಪಡೆದದ್ದು ಯುವರಾಜ್ ಸಿಂಗ್, ಶತಕದಂಚಿನಲ್ಲಿ ದಿಲ್ಶಾನ್ ರೋಹಿತ್ ಶರ್ಮಾರಿಂದ ರನ್ನೌಟಾ ಗಿದ್ದರು. ತುಷಾರ ೧೧ ರನ್ ಗಳಿಸಿ ಇಶಾಂತ್ ಶರ್ಮಾರಿಗೆ ಮೂರನೇ ಬಲಿಯಾದರು. ಮಹರೂಫ್ ೩೨ ದಾಖಲಿಸಿದ್ದಾಗ ಜಡೇಜಾ ಮತ್ತು ಧೋನಿಯಿಂದ ರನ್ನೌಟಾದರು. ಕುಲಶೇಖರ (೧೦) ಮತ್ತು ಮುರಳೀ ಧರನ್ (೩) ಅಜೇಯರಾಗುಳಿದಿ ದ್ದಾರೆ. ಇಂದು ಟೀಮ್ ಇಂಡಿಯಾ ದಲ್ಲಿ ನಾಯಕ ಮಹೇಂದ್ರ ಸಿಂಗ ಧೋನಿ ಮತ್ತು ಗೌತಮ್ ಗಂಭೀರ್ ಹೊರತುಪಡಿಸಿ ಉಳಿದೆಲ್ಲರೂ ಬೌಲಿಂಗ್ ಮಾಡಿದ್ದು ವಿಶೇಷ. ಇಶಾಂತ್ ಶರ್ಮಾ ೩, ಯುವರಾಜ್ ಸಿಂಗ್ ೨, ಇರ್ಫಾನ್ ಪಠಾಣ್ ೧ ವಿಕೆಟ್ ಪಡೆದರೆ, ಉಳಿದವರು ತಮ್ಮ ಬೌಲಿಂಗ್ ಪರೀಕ್ಷೆ ನಡೆಸಿದರು. ಬಾಲಾಜಿ, ಜಡೇಜಾ, ಸೆಹ್ವಾಗ್, ಯೂಸುಫ್ ಪಠಾಣ್ , ಸುರೇಶ್ ರೈನಾ, ರೋಹಿತ್ ಶರ್ಮಾ ಬೌಲಿಂಗ್ ಮಾಡಿದ ಇತರರು.

No Comments to “ಸ್ವೀಪ್ ಕನಸು ಭಗ್ನ ; ೪-೧ ರಿಂದ ಸರಣಿ ಭಾರತದ ವಶ”

add a comment.

Leave a Reply

You must be logged in to post a comment.