ಪ್ರತಿಭೆಯೇ ನನಗೆ ಗಾಡ್ ಫಾದರ್ - ಭೇಷ್ ಎಂ.ಡಿ. ಹಾಷಂ
ಅದು ೮೦ ದಶಕದ ಆರಂಭದ ದಿನಗಳು, ತಿಪಟೂರು ಬಳಿಯ ದಿಡಗ ಗ್ರಾಮದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಾಡಾಗಿತ್ತು. ಮಧ್ಯಾಹ್ನ ೩ ರ ಸುಮಾರಿಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಅತಿಥಿಗಳ ಬರುವಿಕೆ ತಡವಾದಾಗ ಜನರ ತಾಳ್ಮೆ ಮಿತಿ ಮೀರುತ್ತಿತ್ತು. ಅಂತೂ-ಇಂತೂ ಕತ್ತಲು ಹರಿಯುವ ವೇಳೆಗೆ ತಾರೆಗಳ ಆಗಮನವಾಯ್ತು. ವಿಷ್ಣುವರ್ಧನ್, ಭಾರತಿ, ನಾಗತ್ತಿಹಳ್ಳಿ ಚಂದ್ರಶೇಖರ್ ಮತ್ತಿತರರು ಆಗಮಿಸಿದಾಗ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಇವರೆಲ್ಲರನ್ನೂ ಕಾರ್ಯಕ್ರಮಕ್ಕೆ ಕರೆತಂದವನು ಅದೇ ಊರಿನ ಸಾಬರ ಹುಡುಗ. ಊರ ಪಟೇಲ ಮಾತನಾಡಲು ಎದ್ದು ನಿಂತಾಗ ಘಿ‘ ಇವ್ನಾ ನಮ್ಮೂರ ಸಾಬೀ….ಘಿ’ ಎಂದು ಉದ್ಗರಿಸಿದ್ದ. ಇದರಿಂದ ಮನಸ್ಸಿಗೆ ಕೊಂಚ ಕಸಿವಿಸಿಯಾದರೂ, ಬೇಸರಿಸಿಕೊಳ್ಳದ ಸಾಬರ ಹುಡುಗ ಹಾಡಲು ಅವಕಾಶ ಸಿಕ್ಕಾಗ ವೇದಿಕೆಯಲ್ಲಿದ್ದರೂ ತಲೆದೂಗುವಂತೆ ಹಾಡಿದ. ಯಾವ ಭಾವ ಭಾಷೆಯ ದೃಷ್ಟಿಯಲಿ ಯಾವ ಭಾವ ಗೀತೆಯ ಬರೆದು ನಾ ಹಾಡಲೀ ದೇಶಾಭಿಮಾನವೇ ಇಲ್ಲದ ಭಾಷಾಭಿಮಾನವೇ ಇಲ್ಲದ ಕುಲದೇಶೀಯರ ಮುಂದೆ … ಕೆಲ ಪರದೇಶೀಯವರ ಮುಂದೆ…. ಹೀಗೆ ಸಾಗಿದ ಹಾಡು- ಹಾಡಿನ ದಾಟಿಯನ್ನು ಆಸ್ವಾದಿಸಿದ ಜನ ಖುಷಿಯಿಂದ ಸಿಳ್ಳೇ ಹಾಕಲಾರಂಭಿಸಿದರು. ವೇದಿಕೆಯ ಮೇಲಿದ್ದ ವಿಷ್ಣುವರ್ಧನ್ ಮತ್ತು ನಾಗತ್ತಿಹಳ್ಳಿ ಸಾಬರ ಹುಡುಗನನ್ನು ಮನಸಾರೆ ಪ್ರಶಂಶಿಸಿದರು. ಅಭಿಮಾನಿಗಳು ಭಾರೀ ಗಾತ್ರದ ಹಾರ ಹಾಕಲು ಬಂದಾಗ ವಿಷ್ಣುವರ್ಧನ್ ಮತ್ತು ದಂಪತಿಗಳು ಸಾಬರ ಹುಡುಗನನ್ನು ಕರೆದು ಹಾರ ಅರ್ಪಿಸಿ ಸಂತಸಪಟ್ಟರು. ಆ ಯುವ ಪ್ರತಿಭೆಯೇ ಸಾಹಿತಿ-ಕಥೆ-ಚಿತ್ರಕಥೆ- ಸಂಭಾಷಣೆ- ನಿರ್ದೇಶಕರೆಂದು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಎಂ.ಡಿ. ಹಾಷಂ. ಇವರು ಹಾಸನ ಜಿಲ್ಲೆಯವರೆಂದು ಬಹುತೇಕರಿಗೆ ತಿಳಿದಿಲ್ಲ. ಎಂ.ಡಿ. ಹಾಷಂ ಮೂಲತಃ ಹಾಸನದ ಶಾಂತಿಗ್ರಾಮದವರಾದರೂ ಬಂದು ನೆಲೆಸಿದ್ದು ಮಾತ್ರ ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲಿ. ವೃತ್ತಿಯಲ್ಲಿ ಕಂಚುಗಾರರಾಗಿದ್ದರು, ಕಂಡ ಕನಸುಗಳನ್ನು ಸಾಕಾರ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಿದಾಗ ತಲುಪಿದ್ದು ಚಿತ್ರರಂಗಕ್ಕೆ ಈ ಹಾದಿ ಅವರಿಗೆ ಸುಗಮವಾಗಿಯೇನೂ ಇರಲಿಲ್ಲ. ಕಲಾವಿದರ ಕುಟುಂಬದ ಹಾಷಂರ ತಂದೆ ಜಮಾಲ್‌ಸಾಬ್ ಕಂಚುಗಾರ ವೃತ್ತಿ ಅವಲಂಬಿಸಿದರು. ಬಯಲು ಸೀಮೆ ನಾಟಕಗಳಲ್ಲಿ ತಬಲ ಮತ್ತು ಮೃದಂಗ ಬಾರಿಸುತ್ತಿದ್ದರಂತೆ. ಸಹಜವಾಗಿಯೇ ಊರೂರು ಅಲೆಯುತ್ತಿದ್ದ ತಂದೆ ಜೊತೆಯಲ್ಲಿ ಹಾಷಂ ಕೂಡ ಹೋಗುತ್ತಿದ್ದುದರಿಂದ ತಬಲ ಕಲಿತರು. ೬ ನೇ ತರಗತಿ ಕಲಿಯುವ ವೇಳೆಗೆ ಹಾಡು-ಕವನ ಬರೆಯುವ ಅಭ್ಯಾಸ. ಹೈಸ್ಕೂಲ್ ಮೆಟ್ಟಿಲು ಹತ್ತಿದಾಗ ಬ್ರಾಹ್ಮಣರ ಮನೆಗೆ ಪಾತ್ರೆ ಕಲಾಯ ಮಾಡಲು ಹೋಗುತ್ತಿದ್ದ ಹಾಷಂಗೆ, ಶೆಳ್ವೆಪಿಳೈಂಗಾರ್, ಕನ್ನಡ ಪಂಡಿತ ಸ್ವಾಮಿಗೌಡರ ಸಾಂಗತ್ಯ ದಿಂದಾಗಿ ಭಾಷಾ ಪ್ರೌಢಿಮೆ ಬಂತು. ಸಾಹಿತ್ಯ ರಚನೆಗೆ ಪ್ರೋತ್ಸಾಹ ದೊರೆಯಿತು. ಪರಿಣಾಮ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ನಾಟಕಗಳ ರಚನೆ ಮಾಡಿದರು. ಮುಂದೆ ೧೯೭೧-೭೨ ರ ವೇಳೆಗೆ ಹಾಸನದ ಜನರಲ್ ಹಾಸ್ಟೆಲ್ ಸೇರಿ ಪಿಯುಸಿ ಕಲಿತರು. ತಂದೆ ಎರಡನೇ ವಿವಾಹವಾಗಿದ್ದರಿಂದ ಕುಟುಂಬದ ನಿರ್ವಹಣೆಯ ಹೊಣೆ ಹೆಗಲಿಗೆ ಬಿದ್ದು ಓದಿಗೆ ತಿಲಾಂಜಲಿ ಇತ್ತರು. ಕಲಿತಿದ್ದ ಕಲಾಯ ವೃತ್ತಿ ಮುಂದುವರೆಸಿ, ಜೊತೆ ಜೊತೆಗೆ ಹಾಡುಗಳ ರಚನೆ, ನಟನೆ, ತಬಲ ವಾದನ, ಹರಿಕಥೆ, ಕವ್ವಾಲಿ ಹಾಡುಗಾರಿಕೆಗಳಲ್ಲಿ ತೊಡಗಿಸಿಕೊಂಡರು. ತುಮಕೂರು, ಹಾಸನ, ಚಿಕ್ಕಮಗಳೂರು ಮತ್ತಿತರೆಡೆಗೆ ವೃತ್ತಿಯ ದೆಸೆಯಿಂದ ಸಂಚರಿಸಿದ ಹಾಷಂ ೫೦ ಕ್ಕೂ ಹೆಚ್ಚು ಹಿಂದೂ ದೇಗುಲಗಳಿಗೆ ಸ್ವಹಸ್ತದಿಂದ ಕಳಸಗಳನ್ನು ನಿರ್ಮಿಸಿದರು. ಭಜನೆ ರಚಿಸಿ ಹಾಡಿದರು. ಆ ಮೂಲಕ ಧಾರ್ಮಿಕ ಸೌಹಾರ್ಧತೆಯ ಪ್ರತಿನಿಧಿಯೂ ಆದರು. ಮುಂದೆ ೧೯೮೧ ರಲ್ಲಿ ಘಿ‘ಕಲ್ಲು ವೀಣೆ ನುಡಿಯಿತುಘಿ’ ಸಿನಿಮಾ ಚಿತ್ರೀಕರಣಕ್ಕೆ ತಿಪಟೂರಿಗೆ ಬಂದಿದ್ದ ಎ.ಟಿ. ರಘು ಅವರಿಗೆ ಹಾಷಂರನ್ನು ಭಾಸ್ಕರ್ ನಾಯ್ಡು ಪರಿಚಯಿಸಿ, ಯಾವುದಾದರೂ ಅವಕಾಶ ನೀಡುವಂತೆ ಪತ್ರ ಬರೆದುಕೊಟ್ಟರು. ಎ.ಟಿ. ರಘು ಗರಡಿಯಲ್ಲಿ ಕಥೆ-ಚಿತ್ರಕಥೆ- ಸಂಭಾಷಣೆ ಬರೆಯುವ ಇತಿ -ಮಿತಿ, ಅಳ- ಅಗಲಗಳನ್ನು ಕಂಡುಕೊಂಡರು. ೧೯೮೨ ರಲ್ಲಿ ರಘು ನಿರ್ದೇಶನದ ಲೇಡೀಸ್ ಹಾಸ್ಟೆಲ್ ಚಿತ್ರ ಆರಂಭವಾಯಿತು. ಸಂಭಾಷಣೆಕಾರ ಸೋಮು ಆ ಚಿತ್ರಕ್ಕೆ ಚಿತ್ರಕಥೆ ಸಂಭಾಷಣೆ ಬರೆದಿದ್ದರು, ಅದನ್ನು ನೋಡುವಂತೆ ಹಾಷಂಗೆ ಕೊಟ್ಟಾಗ ಕೊಂಚ ಬದಲಾವಣೆ ಮಾಡಿದ್ದು ನಿರ್ದೇಶಕರಿಗೆ ಇಷ್ಟವಾಗಿ ಆ ಚಿತ್ರಕ್ಕೆ ಅವರೇ ಚಿತ್ರಕಥೆ ಸಂಭಾಷಣೆ ಕಾರರಾದರಲ್ಲದೇ ೨ ಹಾಡುಗಳನ್ನು ಬರೆದರು. ಆದರೆ ತೆರೆಯ ಮೇಲೆ ಹೆಸರು ಬರುವ ಕನಸು ಹಾಷಂಗಿತ್ತು, ದುರಾದೃಷ್ಟವಶಾತ್ ಆ ಚಿತ್ರ ತೆರೆಕಾಣಲಿಲ್ಲ, ಈ ನಡುವೆ ಎಂ.ಡಿ. ಹಾಷಂರ ಕನ್ನಡ ಪ್ರೀತಿ ಮತ್ತು ಕ್ರಿಯಾಶೀಲತೆಯನ್ನು ಗಮನಿಸಿದ್ದ ನಾಗತ್ತಿಹಳ್ಳಿ ಚಂದ್ರಶೇಖರ್ ತರಂಗ, ವಾರ ಪತ್ರಿಕೆಗೆ ಇವರ ಬಗ್ಗೆ ಪರಿಚಯ ಲೇಖನ ಬರೆದರು. ಇದನ್ನು ಗಮನಿಸಿದ ಕೇಂದ್ರ ಸರ್ಕಾರದ ಅಧಿಕಾರಿಗಳು ಡಿಡಿ-೧ ರ ಘಿ‘ಎ ಫೇಸ್ ಆಫ್ ವರ್ಲ್ಡ್‌ಘಿ’ ಕಾರ್ಯ ಕ್ರಮಕ್ಕೆ ರಾಷ್ಟ್ರೀಯ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಹಾಷಂ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲು ಸೂಚಿಸಿ ದರು. ಎಚ್.ಎಂ. ಕೃಷ್ಣಮೂರ್ತಿ ಇವರ ಬಗ್ಗೆ ಸಾಕ್ಷ್ಯ ಚಿತ್ರವನ್ನು ಮಾಡಿದರು, ನಂತರ ಅದು ದೂರದರ್ಶನದಲ್ಲಿ ಪ್ರಸಾರ ವಾಯ್ತು. ಹೀಗೆ ಅಮೆರಿಕಾದ ವಿಜ್ಞಾನಿ ರಾಘವ ರೆಡ್ಡಿಯ ಪರಿಚಯವಾಯಿತು. ಶಿಕ್ಷಣದಲ್ಲಿ ಸಂಗೀತದ ಮೂಲಕ ವಿಜ್ಞಾನ ಮತ್ತು ಗಣಿತ ಕಲಿಸುವ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡುವ ಕನಸನ್ನು ಹಾಷಂ ಕಂಡಿದ್ದರು. ದ್ವಂದ್ವಕ್ಕೆ ಸಿಲುಕಿ ಆ ಯೋಜನೆ ಕೈಗೂಡಲಿಲ್ಲ. ಅಮರ್‌ಮುಲ್ಲಾ ಘಿ‘ಅಪ್ಪಿಕೋ ನನ್ನಘಿ’ ಎಂಬ ಚಿತ್ರ ಆರಂಭಿಸಿದಾಗ ಅಲ್ಲಿ ಸಾಹಿತ್ಯ ಸಂಭಾಷಣೆ ಬರೆಯುವ ಜೊತೆಗೆ ಸಹ ನಿರ್ದೇಶಕರಾದರು. ಆದರೆ ಚಿತ್ರವೂ ಟೇಕಾಫ್ ಆಗಲಿಲ್ಲ. ತಿಪಟೂರು ರಘು ನಿರ್ದೇಶನದ ಘಿ‘ನಾಗನಿಧಿ ಘಿ’ಯ ಪರಿಸ್ಥಿತಿ ಅದೇ ಆಗಿತ್ತು. ನಂತರ ಮದ್ರಾಸ್‌ಗೆ ಹೋದ ಹಾಷಂ ನಿರ್ದೇಶಕ ರಾಜ್‌ಕಿಶೋರ್ ಬಳಿ ಕೆಲಸ ಮಾಡಿದರು. ೧೯೮೯ ರ ಹೊತ್ತಿಗೆ ಘಿ‘ಸತ್ಯ ಸಂದೇಶಘಿ’ ಚಿತ್ರಕ್ಕೆ ಚಿತ್ರಕಥೆ ಸಾಹಿತ್ಯ ಬರದ್ದದ್ದಲ್ಲದೆ ನಟಿಸಿ ಅಸೋಸಿಯೇಟ್ ನಿರ್ದೇಶಕರಾಗಿದ್ದರು. ೯೦-೯೧ ರಲ್ಲಿ ಅವಳೆ ನನ್ನ ಹೆಂಡ್ತಿ ಖ್ಯಾತಿಯ ನಿರ್ದೇಶಕ ಉಮೇಶ್ ಜೊತೆ ಘಿ‘ಬನ್ನಿ ಒಂದ್ಸಲ ನೋಡಿಘಿ’ ಸಿನಿಮಾಗೆ ಕಥೆ-ಚಿತ್ರಕಥೆ- ಸಂಭಾಷಣೆ- ಹಾಡುಗಳನ್ನು ಬರೆದರು. ಬಿ. ರಾಮಮೂರ್ತಿಯ ಘಿ‘ಲೂಟಿ ಗ್ಯಾಂಗ್‌ಘಿ’, ಘಿ‘ಲಾಠಿಚಾರ್ಜ್‌ಘಿ’, ಸಾಯಿ ಪ್ರಕಾಶ್ ಜೊತೆಗೆ ಗೋಪಿಕಲ್ಯಾಣ, ಶಿವರಾಜ್ ಜೊತೆ ಘಿ‘ಗಂಗಾಯಮುನಾಘಿ’ ಚಿತ್ರಕ್ಕೆ ಕೆಲಸ ಮಾಡಿದರು. ೧೯೯೫ ರಲ್ಲಿ ವಿಷ್ಣುವರ್ಧನ್ ಅಭಿನಯದ ಘಿ‘ತುಂಬಿದ ಮನೆಘಿ’ ಚಿತ್ರಕ್ಕೆ ಎಲ್ಲ ಹಂತದಲ್ಲೂ ಸಕ್ರಿಯವಾಗಿ ದುಡಿದರು. ಆ ಚಿತ್ರದ ಘಿ‘ಕಾವೇರಿ ಸಿರಿಗನ್ನಡ ನಾಡಲಿ ಸಿಂಗಾರ ಮಾಡವ್ಳೇ …ಘಿ’ ಎಂಬ ಹಾಡು ಅತ್ಯಂತ ಜನಪ್ರಿಯವಾಗಿ ಸಿನಿಮಾ ಕೂಡಾ ಹಿಟ್ ಆಯಿತು. ಸ್ವತಃ ವಿಷ್ಣುವರ್ಧನ್, ಎಂ.ಡಿ. ಹಾಷಂ ರ ಪ್ರತಿಭೆಯನ್ನು ಪ್ರಶಂಸಿಸಿದರು. ಪರಿಣಾಮ, ವಿಷ್ಣುವರ್ಧನ್ ಅಭಿನಯದ ಧಣಿ, ದಾಯಾದಿ ಯಲ್ಲಿ ಅವಕಾಶ ಸಿಕ್ಕಿತು. ವಜ್ರುಮುನಿ ಅಭಿನಯದ ಘಿ‘ಪ್ರಚಂಡ ರಾವಣಘಿ’ ಚಿತ್ರಕ್ಕೆ ಬರದ ಸಂಭಾಷಣೆ ಹಾಷಂರತ್ತ ಚಿತ್ರರಂಗ ನೋಡುವಂತೆ ಮಾಡಿತು. ನಂತರದ್ದು ಇತಿಹಾಸ. ಮನ್ಮಥರು, ಬೂತಯ್ಯನ ಮಕ್ಕಳು, ಗಂಧದ ಗೊಂಬೆ ಹೀಗೆ ೩೬ ಚಿತ್ರಗಳಿಗೆ ಹಾಷಂ ಬೆವರು ಹರಿಸಿದ್ದಾರೆ. ಗಂಧದ ಗೊಂಬೆ ಚಿತ್ರದ ಕಥೆ ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಇದೀಗ ಎಂ.ಡಿ. ಹಾಷಂ ಪೂರ್ಣ ಪ್ರಮಾಣದ ಚಿತ್ರ ನಿರ್ದೇಶಕರಾಗಿ ಘಿ’ಭೇಷ್‌ಘಿ’ ಎಂಬ ಹಳ್ಳಿ ಸೊಗಡಿನ ಚಿತ್ರವನ್ನು ನಿರ್ದೇಸುತ್ತಿದ್ದಾರೆ. ಪಕ್ಕದ ಮನೆ ಹುಡುಗಿ ಚಿತ್ರದಲ್ಲಿ ನಟಿಸಿದ ನಾಯಕಿ ಮೂಲತಃ ಚನ್ನರಾಯಪಟ್ಟಣದವರೇ ಆದ ರಂಜಿತ ಮತ್ತು ಸೌರವ್, ನಾಯಕರು. ಅರಕಲಗೂಡು ತಾಲ್ಲೂಕಿನ ರಾಮನಾಥಪುರ, ಕಟ್ಟೇಪುರಗಳಲ್ಲಿ ಶೇ. ೨೦ ರಷ್ಟು ಚಿತ್ರೀಕರಣ ವಾಗಿದೆ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಮಾರ್ಚ್ ೨೫ ರಿಂದ ಕೊಣನೂರು ಹಾಗೂ ರುದ್ರಪಟ್ಟಣ ಗಳಲ್ಲಿ ಚಿತ್ರೀಕರಣ ಪುನಾರಂಭವಾಗುವುದು.