ರಜೆಯ ಮಜ- ಸದ್ವಿ ನಿಯೋಗ

ಪರೀಕ್ಷೆಗಳು ಮುಗಿದು ಆತಂಕದ ಹೆಬ್ಬಂಡೆಯೊಂದನ್ನು ಕರಗಿಸಿ ಮುಂದಿನ ತರಗತಿಗೆ ತೇರ್ಗಡೆಯಾದ ಉಲ್ಲಾಸದಿಂದ ಶಾಲೆಗೆ ಟಾಟಾ ಹೇಳುವ ಏಪ್ರಿಲ್‌ ತಿಂಗಳು ಪ್ರಾರಂಭವಾಗಲಿದೆ. ಭರ್ಜರಿ ಎರಡು ತಿಂಗಳಿಗೆ ಹತ್ತು ದಿನ ಕಡಿಮೆಯೂ ರಜಾವಧಿ. ಏನು ಮಾಡುವುದು ಏನು ಬಿಡುವುದು. ನೆಂಟರಿಷ್ಟರ ಮನೆಗಳಿಗೆ ಭೇಟಿ,ಟಿ.ವಿ.ವೀಕ್ಷಣೆ, ಗಾಳಿಪಟ ಹಾರಿಸುವುದು, ಮತ್ತೆ ಹೊಸ ಸೇರ್ಪಡೆ ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಈಜು ಕಲಿಯುವ ಪ್ರಾಜೆಕ್ಟ್‌ , ಹತ್ತಿರ ಬೆಟ್ಟವಿದ್ದರೆ ಚಾರಣದತ್ತ ಒಂದು ಕಾರ್ಯಕ್ರಮ ಉಪಧ್ಯಾಯರು ವರ್ಣಿಸಿದ್ದ ಕಾಡಿನ ಬಗ್ಗೆ ಒಂದಿಷ್ಟು ಕುತೂಹಲದಿಂದ ಕಾಡಿಗೆ ಭೇಟಿ, ಹೀಗೆ ರಜೆಯ ದಿನಚರಿ ಪ್ರಾರಂಭವಾಗಿಯೇ ಬಿಡುತ್ತದೆ. ಪಠ್ಯಪುಸ್ತಕ ಲೇಖನಿಗಳೆಲ್ಲವನ್ನು ಸುತ್ತಿ ಅಟ್ಟದ ಮೇಲೆಸೆದು ಮತ್ತೆ ಜೂನ್‌ ಒಂದರ ತನಕ ಅತ್ತ ನೋಡದಂತಿರುವ ಪ್ರತಿಜ್ಞೆ ಮಾಡುವ ವಿದ್ಯಾರ್ಥಿಗಳಿಗೆ ರಜೆಯಲ್ಲಿ ಮಾಡಲೇ ಬೇಕಾದ ಕೆಲಸಗಳ ಬಗ್ಗೆ ಶಿಕ್ಷಕರು ಮನವರಿಕೆ ಮಾಡಿಕೊಡಬೇಕು. ರಜೆ ಪ್ರಾರಂಭವಾದ ಕೂಡಲೆ ನಿಮ್ಮ ಎಲ್ಲಾ ಚಟುವಟಿಕೆಗಳ ಜೊತೆಗೆ ಒಂದೆರಡು ತಾಸು ಪಠ್ಯದ ಬಗ್ಗೆ ಗಮನ ಹರಿಸಲು ಶಿಕ್ಷಕರು ಕಡ್ಡಾಯ ಮಾಡಬೇಕು. ಇಲ್ಲದಿದ್ದಲ್ಲಿ ಜೂನ್‌ ಪ್ರಾರಂಭದ ವೇಳೆಯಲ್ಲಿ ಶಿಕ್ಷಕರು ಎಲ್ಲವನ್ನು ಮರೆತ ವಿದ್ಯಾರ್ಥಿಗಳನ್ನು ನೋಡುತ್ತ ಎಲ್ಲವನ್ನು ನೆನಪಿಸುವಂತಹ ಕೆಲಸವೇ ಶಾಲೆಯಲ್ಲಿ ಪ್ರಧಾನವಾಗಿ ಬಿಡುತ್ತದೆ. ಆದ್ದರಿಂದ ರಜೆ ಪ್ರಾರಂಭವಾಗುವ ಮುನ್ನವೇ ಮಕ್ಕಳಿಗೆ ಹೊರೆಯಾಗದಂತೆ ಪ್ರತಿನಿತ್ಯ ಮಾಡುವ ಆಯಾಯಾ ತರಗತಿಯಲ್ಲಿ ಕಲಿತಿರುವ ವಿಷಯಗಳ ಮೂಲಭೂತ ಜ್ಞಾನವನ್ನು ಮರೆಯದಂತೆ ಮನೆಗೆಲಸ ಕೊಡುವುದು ಅತ್ಯಂತ ಸೂಕ್ತವಾಗಿರುತ್ತದೆ. ಹಿಂದಿ ಅಕ್ಷರ ಕಾಗುಣಿತ ಪದಗಳನ್ನು ಬರೆಯಬೇಕು. ಇದನ್ನೆಲ್ಲ ಬರೆಯಲು ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದ ಒಂದು ತಾಸು ಮೀಸಲಿಟ್ಟರೆ ಸಾಕು. ತಮ್ಮ ರಜೆಯ ಮಜಾ ಕ್ಷಣಗಳ ನಡುವೆಯೂ ಮರೆಯದೆ ಮಾಡಿದರೆ ಶಾಲೆ ಆರಂಭವಾದರೂ ಏನೂ ನೆನಪಿಗೆ ಬರುತ್ತಿಲ್ಲ ಎಂದು ಪರದಾಡಬೇಕಾಗಿಲ್ಲ. ಶಿಕ್ಷಕರಿಗೂ ಮುಂದಿನ ಪಾಠದತ್ತ ಗಮನ ಕೊಡಲು ಸಹಕಾರಿಯಾಗುತ್ತದೆ. ಇದಿಷ್ಟು ಪಾಠಕ್ಕೆ ಸಂಬಂಧಿಸಿದ್ದಾಯಿತು. ಇನ್ನು ರಜೆ ಸಜೆಯಾಗದಂತೆ ವಿದ್ಯಾರ್ಥಿಗಳು ತಮ್ಮ ಅಸ್ತಕ್ತಿಗನುಗುಣವಾಗುವ ವಿಷಯಗಳನ್ನು ಕಲಿಯಲು ಸದಾವಕಾಶ ಈಗ ದೊರೆತಿದೆ. ಸಂಗೀತದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿ, ಚಿತ್ರಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಸಮೀಪದಲ್ಲಿ ಯಾರಾದರೂ ಅದನ್ನು ಕಲಿಸುವ ಶಿಕ್ಷಕರಿದ್ದರೆ ಅವರಲ್ಲಿ ವಿನಂತಿಸಿಕೊಂಡು ಭಾವಗೀತೆ, ಭಕ್ತಿಗೀತೆಗಳನ್ನು ಹೇಳಿಸಿ ಕೊಳ್ಳುವುದು, ಚಿತ್ರ ಬರೆಯುವ ಪ್ರಾಥಮಿಕ ಹಂತಗಳನ್ನು ಕಲಿಯವುದು, ಚಿತ್ರ ಬರೆದು ಬಣ್ಣ ಹಾಕುವುದು ಮುಂತಾದವುಗಳನ್ನು ಮಾಡಬಹುದು. ಉತ್ತಮ ಚಿತ್ರಗಳ ಆಲ್ಬಮ್‌ ತಯಾರಿಸಿ ಶಾಲಾ ಆರಂಭಾವದ ನಂತರ ಶಿಕ್ಷಕರಿಗೆ ತೋರಿಸಿ ಮೆಚ್ಚುಗೆಗಳಿಸಬಹುದು. ಗೆಳಯರಿಗೂ ಮಾರ್ಗದರ್ಶಿಗಳಾಗಬಹುದು. ಪ್ರತಿನಿತ್ಯ ಹತ್ತಿರದ ವಾಚಾನಾಲಯಕ್ಕೆ ಭೇಟಿ ನೀಡಿ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ರಜಾದಿನಗಳು ಅನುಕೂಲಕರ ವಾಗಿದೆ. ಓದುವ ಆಸಕ್ತಿ ಇದ್ದರೆ ಶಾಲಾ ವಾಚನಾಲಯದಲ್ಲಿ ಕೆಲವು ಪುಸ್ತಕ ತೆಗೆದಕೊಂಡು ರಜೆಯಲ್ಲಿ ಓದಿ ಅದರ ಬಗ್ಗೆ ತಮ್ಮ ಅನಿಸಿಕೆ ಬರೆಯುವ ಅಭ್ಯಾಸ ಬೆಳೆಸಿ ಕೊಳ್ಳಲು ರಜೆ ದಿನಗಳು ಅತ್ಯುತ್ತಮ ವಾಗಿದೆ. ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಲು ಪ್ರತಿದಿನ ದಿನಚರಿ ಬರೆಯಬಹುದು. ಅಂದಂದು ಯಾವ ಘಟನೆ ನಡೆಯಿತು. ತಾನು ಎಲ್ಲಿಗೆ ಹೋಗಿದ್ದೆ ಅಲ್ಲಿನ ವಿಶೇಷತೆ ಏನು, ಮನಸ್ಸಿಗಾದ ಸಂತೋಷ,ಬೇಸರ ಎಲ್ಲವನ್ನೂ ಪದಗಳಲ್ಲಿ ಹಿಡಿದಿಡುತ್ತ ಓದಲಿ. ಮುಂದೆ ಉತ್ತಮ ಬರಹಗಾರನಾಗಲು ಸಾಧ್ಯವಿದೆ. ಪ್ರತಿನಿತ್ಯ ಬರೆಯಲು ೨೦೦ ಪುಟದ ಒಂದು ನೋಟ್‌ಪುಸ್ತಕವನ್ನು ಮೊದಲು ಖರೀದಿಸಿ ಅದಕ್ಕೆ ಬೇಸಿಗೆ ರಜಾವಧಿಯ ಪುಸ್ತಕ ಎಂದೇ ನಮೂದಿಸಿ ಬರೆಯಲು ಪ್ರಾರಂಭಿಸಬೇಕು. ಮುಂದಿನ ತರಗತಿಯ ಕನ್ನಡ ಇಂಗ್ಲಿಷ್‌ ಪಠ್ಯಪುಸ್ತಕ ಕೊಳ್ಳಲು ಸಾದ್ಯವಾಗದಿದ್ದರೆ ಹಿಂದಿನ ವರ್ಷದಂತೂ ಪುಸ್ತಕ ಇರುತ್ತದೆ. ಪ್ರತಿದಿನ ಒಂದು ಪುಟ ಕನ್ನಡ ಪಾಠ, ಇನ್ನೊಂದು ಪುಟ ಇಂಗ್ಲಿಷ್‌ ಪಾಠ ಬರೆಯಬೇಕು. ಇದರಿಂದ ಕೈಬರಹ ಉತ್ತಮವಾಗುವುದರೊಂದಿಗೆ ಪಾಠ ಓದುತ್ತ ಬರೆಯುವುದರಿಂದ ಓದುವ ಸಾಮರ್ಥ್ಯ ವೂ ಹೆಚ್ಚಾಗುತ್ತದೆ. ಕನ್ನಡ ಹಾಗು ಇಂಗ್ಲಿಷ್‌ನಲ್ಲಿ ಬರೆಯಬೇಕು. ಹೀಗೆ ಮಾಡುವುದರಿಂದ ಕಠಿಣಪದಗಳನ್ನು ಓದುವುದು ಮತ್ತು ತಪ್ಪಿಲ್ಲದೆ ಬರೆಯುವುದು ಎರಡೂ ಸಿದ್ದಿಸುತ್ತದೆ. ಆಯಾಯಾ ದಿನದ ದಿನಾಂಕವನ್ನು ತಪ್ಪದೆ ನಮೂದಿಸಬೇಕು. ೨ ರಿಂದ ೨೦ ರವರೆಗೆ ಮಗ್ಗಿಯನ್ನು ಪ್ರತಿನಿತ್ಯವೂ ಬರೆಯಬೇಕು. ಗಣಿತದ ಮೂಲಕ್ರಿಯೆಗಳಾದ ಕೂಡುವುದು, ಕಳೆಯುವುದು ಗುಣಿಸುವುದು, ಭಾಗಿಸುವುದು ಹೀಗೆ ತಲಾ ಒಂದೊಂದು ಲೆಕ್ಕವನ್ನು ಮಾಡಿ, ಸಂಖ್ಯೆಗಳನ್ನು ಸ್ಥಾನಕ್ಕನುಗುಣವಾಗಿ ಅಕ್ಷರಗಳಲ್ಲಿ ಬರೆಯುವ ಒಂದೊಂದು ಸಂಖ್ಯೆಯನ್ನು ಬರೆದರೆ ಮುಂದಿನ ತರಗತಿಯಲ್ಲಿ ಗಣಿತ ಕಷ್ಟಕರ ಎಂದೆನಿಸಲಾರದು. ಜೊತೆಗೆ ಗಣಿತದ ಸೂತ್ರಗಳು ಕೊಷ್ಟಕಗಳನ್ನು ಬರೆದರೆ ಸೂತ್ರಗಳನ್ನು ನೆನಪಿನಲ್ಲಿರಿಸಿಕೊಳ್ಳಲು ಸುಲಭವಾಗುತ್ತದೆ. ವಿಜ್ಞಾನದ ವಿಷಯಕ್ಕೆ ಬಂದರೆ ದಿನಕ್ಕೊಂದು ಪ್ರಯೋಗ, ಜೀವಶಾಸ್ತ್ರದಲ್ಲಿ ಚಿತ್ರಗಳನ್ನು ಬರೆದು ಭಾಗಗಳನ್ನು ಗುರ್ತಿಸುವುದು ಸೂತ್ರಗಳು ಸಂಕೇತಗಳನ್ನು ಬರೆದು ಕಲಿಯುತ್ತಿದ್ದಾರೆ. ಮುಂದಿನ ತರಗತಿಯಲ್ಲಿ ವಿಜ್ಞಾನವು ಕಷ್ಟವೆನಿಸದು. ಸಮಾಜ ವಿಜ್ಞಾನದಲ್ಲಿ ಜಿಲ್ಲೆಗಳು ರಾಜ್ಯಗಳು, ರಾಜಧಾನಿಗಳು , ನದಿಗಳು ಸಮುದ್ರಗಳು, ಖಂಡಗಳು ಹೀಗೆ ಪಠ್ಯಕ್ಕೆ ಸಂಬಂಧಿಸಿದಂತೆ ಬರೆಯವುದು, ನಕ್ಷೆ ಬಿಡಿಸಿ ಸ್ಥಳಗಳನ್ನು ಗುರ್ತಿಸುವುದು ಮಾಡಬೇಕು, ಇದು ಪ್ರತಿದಿನವು ಒಂದೊಂದರಂತೆ ಬರೆಯಬೇಕು. ಹತ್ತಿರದಲ್ಲಿ ಬೇಸಿಗೆ ಶಿಬಿರಗಳು ನಡೆದರೆ ಅದರಲ್ಲಿ ಭಾಗವಹಿಸುವುದರ ಮೂಲಕ ಹೊಂದಾಣಿಕೆ ಅನ್ಯೋನ್ಯತೆ, ಸಹಕಾರ , ನಾಯಕತ್ವ ಗುಣ ಬೆಳೆಸಿಕೊಳ್ಳುವುದರ ಜೊತೆ ಶಿಬಿರದಲ್ಲಿ ಹೇಳಿಕೊಡುವ ಇತರೆ ವಿಷಯಗಳ ಪರಿಚಯವು ಆಗಿರುತ್ತದೆ. ಗಿಡಮರಗಳನ್ನು ನೋಡುವುದು ಪ್ರಕೃತಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಬೆಟ್ಟಗುಡ್ಡಗಳ ಚಾರಣ ಮಾಡುವುದು ಹೀಗೆ ಅನೇಕ ಹೊಸ ಹೊಸ ವಿಷಯಗಳನ್ನು ಕಲಿಯಲು ರಜೆಯಲ್ಲಿ ಮಾತ್ರ ಅವಕಾಶ. ಆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ವಿದ್ಯಾರ್ಥಿಗಳ ಜಾಣತನ. ನೀರೆಂದರೆ ಎಲ್ಲರಿಗೂ ಇಷ್ಟ. ಈಜುವುದು, ನೀರಿನಲ್ಲಿ ಚೆಲ್ಲಾಟವಾಡುವುದು ಅಂದರೆ ಮಕ್ಕಳಿಗೆ ಪಂಚಪ್ರಾಣ. ಆದರೆ ಮಕ್ಕಳಿಗೊಂದು ಎಚ್ಚರಿಕೆ. ನೀರಿಗಿಳಿಯುವ ಮುನ್ನ ಈಜಿನಲ್ಲಿ ನುರಿತವರು, ಹಿರಿಯರು ಕಡ್ಡಾಯವಾಗಿ ನಿಮ್ಮ ಜೊತೆಗಿರಬೇಕು ನೀರಿನಲ್ಲಿ ಪ್ರಾಣ ಕಳೆದುಕೊಳ್ಳುವ ಮಕ್ಕಳ ಸಂಖ್ಯೆಯೂ ಈ ರಜಾವಧಿಯಲ್ಲಿಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಹೆತ್ತವರ ಸಮ್ಮತಿಯೊಂದಿಗೆ ಈಜಲು ಕಲಿಯಿರಿ. ಅವರ ಕಣ್ಣು ತಪ್ಪಿಸಿ ನೀರಿಗಿಳಿಯಬೇಡಿ. ಪ್ರತಿದಿನ ಟಿ.ವಿ.ಯಲ್ಲಿ ಬರುವ ಸುದಿಟಛಿ ಪ್ರಸಾರ ನೋಡಿ. ಪ್ರಾಣಿಗಳ ಸಸ್ಯಗಳ ಬಗ್ಗೆ ಇರುವ ಛಾನಲ್‌ನ್ನು ನೋಡಿ ಹೊಸ ಹೊಸ ವಿಷಯ ತಿಳಿಯಿರಿ. ಕ್ವಿಜ್‌ ಕಾರ್ಯಕ್ರಮ ತಪ್ಪದೇ ನೋಡಿ ಆ ಕುರಿತಾದ ಪುಸ್ತಕ ಓದಿ. ಇವೆಲ್ಲದರ ಜೊತೆ ಜೊತೆಗೆ ಚೆನ್ನಾಗಿ ಊಟ ತಿಂಡಿ ನಿದ್ರೆ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸಿ ಹೊಸ ವ್ಯಕ್ತಿಗಳಾಗಿ ಶಾಲೆ ಪ್ರವೇಶಿಸಿ ಶಿಕ್ಷಕರಿಗೆ ಅಚ್ಚರಿ ಮೂಡಿಸಿ.

No Comments to “ರಜೆಯ ಮಜ- ಸದ್ವಿ ನಿಯೋಗ”

add a comment.

Leave a Reply

You must be logged in to post a comment.