ಸವೆಸಿದ ಹಾದಿ

ಕಾನೂನು ಪಂಡಿತ, ಪತ್ರಿಕೋದ್ಯಮಿ ಹಾರನಹಳ್ಳಿ ರಾಮಸ್ವಾಮಿ ಅವರು ೧೯೨೨, ಫೆ.೨೨ರಂದು ಅರಸೀಕೆರೆ ತಾಲ್ಲೂಕು ಹಾರನಹಳ್ಳಿಯಲ್ಲಿ ಜನಿಸಿ, ಪಕ್ಕದ ಕಬ್ಬೂರು ಗ್ರಾಮದಲ್ಲಿ ಬೆಳೆದರು. ತಂದೆ ಶ್ಯಾನುಭೋಗ ಅನಂತರಾಮಯ್ಯ, ತಾಯಿ ಭವಾನಮ್ಮ ಐದು ಅಣ್ಣ ತಮ್ಮಂದಿರಲ್ಲಿ ರಾಮಸ್ವಾಮಿ ಅವರೇ ಮಧ್ಯಮ. ಕಬ್ಬೂರು ಗ್ರಾಮದಲ್ಲಿ ಪ್ರಾಥ ಮಿಕ, ಹಾರನಹಳ್ಳಿಯಲ್ಲಿ ಮಾಧ್ಯಮಿಕ, ತಿಪಟೂರಿನಲ್ಲಿ ಪ್ರೌಢಶಿಕ್ಷಣ ಪಡೆದರು. ೧೯೪೨ರಲ್ಲಿ ತುಮಕೂರಿನಲ್ಲಿ ಇಂಟರ್‌ಮೀಡಿಯೆಟ್‌ ಸೇರಿದರು. ೧೯೪೩ ರಿಂದ ೪೫ರವರೆಗೆ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಕಾನೂನು ಕಲಿತರು. ೧೯೪೨ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡರು. ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಅವರು, ಎನ್‌.ಜಿ.ರಂಗ , ಮೊರಾರ್ಜಿ ದೇಸಾಯಿ ಅವರ ಸಂಪರ್ಕ ಪಡೆದು ಗಾಂಧೀಜಿ ಯವರನ್ನು ಭೇಟಿ ಮಾಡಿದರು. ೧೯೫೨ರಲ್ಲಿ ಹಾಸನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದರು. ಪ್ರದೇಶ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಹಾಗೂ ಎ.ಐ.ಸಿ.ಸಿ. ಸದಸ್ಯರೂ ಆದರು. ೧೯೫೩ರಲ್ಲಿ ಹೈದರಾಬಾದ್‌ನಲ್ಲಿ ಪ್ರದಾನಿ ಜವಹರಲಾಲ್‌ ನೆಹರು ಅಧ್ಯಕ್ಷತೆಯಲ್ಲಿ ನಡೆದ ಎ.ಐ.ಸಿ.ಸಿ. ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ರಚನೆ ಬಗ್ಗೆ ಮಾತನಾಡಲು ಅವಕಾಶ ಪಡೆದು ಕೆಂಗಲ್‌ ಹನುಮಂತಯ್ಯ ಅವರಿಂದ ಭಾಷಣ ಮಾಡಿಸಿದರು. ೧೯೬೦ರಲ್ಲಿ ಹಾಸನ, ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನಿಂದ ಆಯ್ಕೆಯಾದರು. ೧೯೭೦ರಲ್ಲಿ ಕಾಂಗ್ರೆಸ್‌ ಇಬ್ಭಾಗವಾದಾಗ ನಿಜಲಿಂಗಪ್ಪ ನೇತೃತ್ವದ ಸಂಸ್ಥಾ ಕಾಂಗ್ರೆಸ್‌ನಲ್ಲಿ ಉಳಿದರು. ಅಲ್ಲಿಂದ ಆರೇಳು ವರ್ಷ ವಕೀಲ ವೃತ್ತಿ ನಡೆಸಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಉದಯಗೊಂಡ ಜನತಾಪಕ್ಷಕ್ಕೆ ನಿಜಲಿಂಗಪ್ಪ ಯಾದಿಯಾಗಿ ಅನೇಕರು ಸೇರ್ಪಡೆಗೊಂಡರೆ ಹಾರನಹಳ್ಳಿ ಕಾಂಗ್ರೆಸ್‌ನಲ್ಲೇ ಮುಂದುವರೆದರು. ೧೯೭೮ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಗಂಡಸಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾದರು. ೧೯೭೯ರಲ್ಲಿ ಪ್ರದೇಶ ಆಡಳಿತ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕಗೊಂಡರು. ೧೯೯೦ರಲ್ಲಿ ವಿಧಾನ ಪರಿಷತ್‌ಗೆ ಮತ್ತೆ ಸದಸ್ಯರಾದ ಅವರು, ೧೯೯೨ರಲ್ಲಿ ಅಸ್ತಿತ್ವಕ್ಕೆ ಬಂದ ವೀರಪ್ಪಮೊಯ್ಲಿ ಮಂತ್ರಿಮಂಡಲದಲ್ಲಿ ಕಾನೂನು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದರು. ೧೯೯೪ರಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಮಕೃಷ್ಣ ಹೆಗಡೆ ವಿರುದಟಛಿ ಸ್ಪರ್ಧಿಸಿ ಸೋತರು. ಎಸ್‌.ಎಂ.ಕೃಷ್ಣ ಸರ್ಕಾರ ಅಧಿಕಾರಕ್ಕೆ ಬಂದಾಗ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಹಾರನಹಳ್ಳಿ ಕೆಲಸ ಮಾಡಿದರು. ನಂತರ ಅವರು ಸಕ್ರಿಯ ರಾಜಕಾರಣದಿಂದ ನಿಧಾನವಾಗಿ ದೂರವಾಗುತ್ತಾ, ಕಾಂಗ್ರೆಸ್‌ಗೆ ಮಾರ್ಗದರ್ಶಕರಾಗಿದ್ದರು. ಲೋಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಗೊಂಡಿದ್ದು, ಪ್ರಸ್ತುತ ಅಧ್ಯಕ್ಷರೂ ಆಗಿದ್ದರು. ಉತ್ತಮ ವಾಗ್ಮಿಯಾಗಿದ್ದ ರಾಮಸ್ವಾಮಿ, ಕೊರವಂಜಿ ಪತ್ರಿಕೆಗೆ ಹತ್ತು ವರ್ಷ ಲೇಖನ ಬರೆದರು. ೧೯೫೨ರಲ್ಲಿ ಹಾಸನ ಜಿಲ್ಲಾ ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ಸ್ಥಾಪಿಸಿದರು. ಮಲೆನಾಡು ಶಿಕ್ಷಣ ಸಂಸ್ಥೆಯನ್ನು ರಚಿಸಿ ೧೯೫೯ರಲ್ಲಿ ಮಲೆನಾಡು ಇಂಜಿನಿಯರಿಂಗ್‌ ಕಾಲೇಜು, ೧೯೬೭ರಲ್ಲಿ ಎ.ವಿ.ಕೆ. ಕಾಲೇಜು, ೧೯೭೩ರಲ್ಲಿ ಎಂ.ಕೃಷ್ಣ ಕಾನೂನು ಕಾಲೇಜು ತೆರೆದರು. ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.

No Comments to “ಸವೆಸಿದ ಹಾದಿ”

add a comment.

Leave a Reply

You must be logged in to post a comment.