ಸಂಯಮ ಮೀರದಂತೆ ಆಯೋಗ ತಾಕೀತು
ನವದೆಹಲಿ : ಚುನಾವಣೆ ನಂತರ ಸಂಯಮ ಮೀರುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಮಾದರಿ ಚುನಾವಣೆ ನೀತಿಸಂಹಿತೆಯನ್ನು ಸರಿಯಾಗಿ ಪಾಲಿಸುವಂತೆ ರಾಜ ಕೀಯ ಪಕ್ಷಗಳು ಮತ್ತು ಧುರೀಣರಿಗೆ ಸೂಚಿಸಿದೆ. ಹಲವಾರು ನಾಯಕರ ಭಾಷಣ ಗಳು ಹಗೆತನದಿಂದ ಕೂಡಿರುವುದು ಹಾಗೂ ಮತಾದರರನ್ನು ಸೆಳೆಯಲು ಹಣದ ಆಮಿಷ ಒಡ್ಡುತ್ತಿರುವುದನ್ನು ಗಮ ನಿಸಿದರೆ ಆಯೋಗ, ಎಲ್ಲಾ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್ ನೀಡಿರುವ ಪವಿತ್ರ ಸಲಹೆಯನ್ನು ಪಾಲಿಸಬೇಕು ಎಂದು ಕೋರಿದೆ. ಚುನಾವಣೆ ಪ್ರಚಾರ ನಡೆಸುವಾಗ ಉನ್ನತ, ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿದು ಚುನಾವಣಾ ಪಾವಿತ್ರ್ಯ ಹಾಗೂ ಸಮಗ್ರತೆ ಕಾಪಾಡಬೇಕು ಎಂದು ಆಯೋಗ ಸಲಹೆ ಮಾಡಿದೆ. ಐದು ಹಂತಗಳ ಚುನಾವಣೆ ಪ್ರಚಾರಕ್ಕೆ ಚಾಲನೆ ದೊರೆತಿದ್ದು, ಶೀಘ್ರವೇ ಪರಾಕಾಷ್ಠೆ ತಲುಪಲಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಮುಖ ರಾಜಕೀಯ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಸಂಯಮರಹಿತ ಅವಹೇಳನ ಕಾರಿ ಭಾಷಣಗಳನ್ನು ಮಾಡುತ್ತಿರುವುದು ನೋವನ್ನುಂಟು ಮಾಡಿದೆ ಎಂದು ಆಯೋಗ ಹೇಳಿದೆ. ವೈಯಕ್ತಿಕ ಚಾರಿತ್ರ್ಯದ ಮೇಲೆ ವಾಗ್ದಾಳಿ ನಡೆಸುತ್ತಿರುವ ಈ ನಾಯಕರು ಪರಸ್ಪರರ ತೇಜೋವಧೆಯಲ್ಲಿ ನಿರತ ರಾಗಿದ್ದಾರೆ. ಕೋಮುದ್ವೇಷ ಕೆರಳಿಸುವ, ಶಾಂತಿ ಕದಡುವ , ಜಾತಿ ಧರ್ಮಗಳ ಆಧಾರಗಳಲ್ಲಿ ಜನತೆಯಲ್ಲಿ ಒಡಕು ಮೂಡಿಸುವಂತಹ ಪ್ರಚೋದನಕಾರಿ ಭಾಷಣಗಳನ್ನು ಮಾಡು ತ್ತಿದ್ದಾರೆ ಎಂದು ಆಯೋಗ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಹಣಕಾಸು ವಿತರಣೆಯೂ ಗುಟ್ಟಾಗಿ ಉಳಿದಿಲ್ಲ. ಇದು ಚುನಾವಣಾ ಮಾದರಿ ನೀತಿಸಂಹಿತೆಯ ಉಲ್ಲಂಘನೆಯಷ್ಟೇ ಅಲ್ಲ. ಕಾನೂನು ಪ್ರಕಾರ ಚುನಾವಣಾ ಅಪರಾಧವೂ ಆಗುತ್ತದೆ ಎಂದು ಆಯೋಗ ಎಚ್ಚರಿಸಿದೆ. ಚುನಾವಣಾ ಪ್ರಚಾರವು ಪಕ್ಷಗಳ ಸಾಧನೆ, ಕಾರ್ಯಕ್ರಮಗಳು ಮತ್ತು ಹಿಂದಿನ ಸಾಧನೆಗಳ ದಾಖಲೆ ಮಾತ್ರ ಆಗಿರಬೇಕು ಎಂದು ಮಾದರಿ ನೀತಿ ಸಂಹಿತೆ ಸೂಚಿಸುತ್ತದೆ. ಹೀಗಾಗಿ ಪ್ರತಿ ಸ್ಪರ್ಧಿಯ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸುವುದು, ಸಾರ್ವಜನಿಕ ಜೀವನಕ್ಕೆ ಸಂಬಂಧವಿರದ ವೈಯಕ್ತಿಕ ವಿವರಗಳನ್ನು ಕೆದಕುವುದು ತರವಲ್ಲ ಎಂದು ಆಯೋಗ ತಾಕೀತು ಮಾಡಿದೆ. ಆಯೋಗ ಈ ಸೂಚನೆ ನೀಡಿರುವ ಬೆನ್ನ ಹಿಂದೆಯೇ ಪುನಃ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರ ನಡುವೆ ಮಾತಿನ ವಾಕ್ ಸಮರ ಮುಂದುವರೆದಿದೆ.