ವಿದ್ಯುತ್ ಸಮಸ್ಯೆ ಬಗೆಹರಿಸಲು ೪ ವರ್ಷ ಬೇಕು
ಅರಸೀಕೆರೆ : ರಾಜ್ಯದ ವಿದ್ಯುತ್ ಸಮಸ್ಯೆ ೪ ವರ್ಷಗಳಲ್ಲಿ ಪರಿಹಾರ ಆಗುವುದೆಂದು ವಿದ್ಯುತ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಚಿಕ್ಕಮಗಳೂರಿಗೆ ಹೋಗುವ ಮಾರ್ಗದ ಮಧ್ಯೆ ಅರಸೀಕೆರೆ, ತಿಪಟೂರು ರಸ್ತೆಯ ರಾಮಸಾಗರ ಗ್ರಾಮದಲ್ಲಿ ಮೊನ್ನೆ ನಡೆದ ಅಪಘಾತದಲ್ಲಿ ಮಡಿದ ಶ್ರೀಧರ್ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ ವಿದ್ಯುತ್ ಉತ್ಪಾದನಾ ದಿಕ್ಕಿನಲ್ಲಿ ಕಳೆದ ೭-೮ ವರ್ಷಗಳಿಂದ ಗಮನಕೊಡದೆ ಇದ್ದುದರಿಂದ ಹೋದ ವರ್ಷ ಜಲಾನಯನ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿರುವುದು, ವಿದ್ಯುತ್ ಬಳಕೆಯು ಹೆಚ್ಚಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಇನ್ನು ಮುಂದೆ ಅಸಂಪ್ರದಾಯಿಕ ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತುಕೊಡಲು ಕಾರ್ಯ ಪ್ರವೃತ್ತರಾಗಿದ್ದು, ಹೈಡ್ರೋಪವರ್, ವಿಂಡ್‌ಪವರ್ ಹಾಗೂ ಗ್ಯಾಸ್ ಮೂಲಕ ವಿದ್ಯುತ್ ತಯಾರಿಕಾ ಘಟಕಗಳಿಗೆ ಯೋಜನೆ ರೂಪಿಸಲಾಗಿದೆ. ಹೈಡ್ರೋಪವರ್ ಮೂಲಕ ಕಳೆದ ಸಾಲಿನಲ್ಲಿ ೨೫೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿದ್ದು ಈ ವರ್ಷ ೧೦೦೦ ಮೆಗಾವ್ಯಾಟ್ ಉತ್ಪಾದನೆಯ ಗುರಿ ಹೊಂದಲಾಗಿದ್ದು ಹೈಡ್ರೋಪವರ್ ಉತ್ಪಾದನೆಗೆ ಸಮುದ್ರದ ನೀರನ್ನು ಬಳಸುವುದರಿಂದ ಉತ್ತರ ಕನ್ನಡ ಜಿಲ್ಲೆಯು ಈ ಯೋಜನೆಗೆ ಪ್ರಶಸ್ತವಾಗಿದ್ದು, ಅಲ್ಲಿನ ಪರಿಸರವಾದಿಗಳ ಮನವೊಲಿಸಿ ಯೋಜನೆಯನ್ನು ಕಾರ್ಯಗತ ಮಾಡಲಾಗಿದೆ ಎಂದರು. ಗ್ಯಾಸ್ ಮೂಲಕ ವಿದ್ಯುತ್ ಉತ್ಪಾದನೆಯನ್ನು ಸಹ ಉತ್ತರಕನ್ನಡದ ತದಡಿ ಗ್ರಾಮದಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದು ಹಡಗುಗಳ ಮೂಲಕ ಗ್ಯಾಸನ್ನು ತೆಗೆದುಕೊಂಡು ಬಂದು ಅದನ್ನು ಸಂಗ್ರಹಿಸಲು ೧೫೦ ಎಕರೆ ಜಾಗವನ್ನು ಕೆ.ಪಿ.ಟಿ.ಸಿ.ಎಲ್. ಮೂಲಕ ಖರೀದಿಸಿದ್ದು ಹಾಗೂ ಉತ್ಪಾದನಾ ಘಟಕಕ್ಕೆ ೧೫೦ ಎಕರೆ ಜಾಗವನ್ನು ಪಡೆದಿದ್ದು ಇದಕ್ಕಾಗಿ ೪೫೦ ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗು ವುದು. ೨ ನೇ ಹಂತದಲ್ಲಿ ೩೦೦ ಎಕರೆ ಜಾಗಕ್ಕೆ ಶಿಫಾರಸ್ಸು ಮಾಡಲಾಗಿದ್ದು ಒಟ್ಟು ೬೦೦ ಎಕರೆ ಪ್ರದೇಶದಲ್ಲಿ ೨೧೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸ ಲಾಗುವುದು ಎಂದರು. ಈ ವರ್ಷ ಈಗಾಗಲೇ ಜಲಾನಯನ ಪ್ರದೇಶಗಳಲ್ಲಿ ಮಳೆ ಚೆನ್ನಾಗಿ ಆಗಿರುವುದರಿಂದಲೂ ಲಿಂಗನ ಮಕ್ಕಿ ಜಲಾಶಯ ತುಂಬಲು ಕೇವಲ ೩ ಅಡಿ ಬಾಕಿ ಉಳಿದಿದ್ದು, ಈ ವರ್ಷ ವಿದ್ಯುತ್ ಸಮಸ್ಯೆ ಇರುವುದಿಲ್ಲವೆಂದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ ಅವರ ಕಾರಿಗೆ ಸಿಕ್ಕಿ ಮೃತಪಟ್ಟ ಶ್ರೀಧರ್ ಅವರ ಕುಟುಂಬವರ್ಗಕ್ಕೆ ಸಾಂತ್ವನ ಹೇಳಿದರು. ಶ್ರೀಧರ್ ಅವರ ತಂದೆ ಶಿವಬಸವಯ್ಯನವರ ಜೊತೆ ಮಾತನಾಡಿ ಅಪಘಾತವಾದಾಗ ತಾವು ಕಾಶಿಗೆ ಹೋಗಿದ್ದು ದೂರವಾಣಿ ಮೂಲಕ ಮಾಜಿ ಶಾಸಕ ಎ.ಎಸ್. ಬಸವರಾಜ್ ಅವರು ಘಟನೆಯನ್ನು ತಿಳಿಸಿದಾಗ ಬಂದ ಕೂಡಲೇ ಬರುವುದಾಗಿ ತಿಳಿಸಿ, ಮೃತ ಶ್ರೀಧರನ ಆತ್ಮಕ್ಕೆ ಶಾಂತಿಯನ್ನು ಕೋರುವುದಾಗಿಯೂ ತಿಳಿಸಿ ತಕ್ಷಣ ಅವರ ಕುಟುಂಬದವರಿಗೆ ಪರಿಹಾರದ ವ್ಯವಸ್ಥೆಯನ್ನು ಹಾಗೂ ವಿಮಾ ಹಣ ಬರಲು ವ್ಯವಸ್ಥೆ ಮಾಡುವು ದಾಗಿಯೂ ತಿಳಿಸಿ ನಾಳೆಯಿಂದ ವಿಧಾನಸಭಾ ಅಧಿವೇಶನವಿರುವು ದರಿಂದ ಈ ದಿವಸ ಚಿಕ್ಕಮಗಳೂರಿನ ಕಾರ್ಯಕ್ರಮ ವನ್ನು ಮುಗಿಸಿಕೊಂಡು ಕೂಡಲೇ ಬೆಂಗಳೂರಿಗೆ ವಾಪಾಸಾಗುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅರಸೀಕೆರೆ ತಾಲ್ಲೂಕಿನ ಎಂ.ಎಸ್.ಎಸ್. ಘಟಕದ ಬಗ್ಗೆ ಪ್ರಶ್ನೆ ಕೇಳಿದಾಗ ತಾಲ್ಲೂಕಿನ ಮೂರು ಘಟಕಗಳಲ್ಲಿ ಕಲ್ಕುಂಡಿ, ಡಿ.ಎಂ. ಕುರ್ಕೆ, ಎಂ.ಎಸ್.ಎಸ್. ಗಳು ಈಗಾಗಲೇ ಕಾರ್ಯೋನ್ಮುಖವಾಗಿದ್ದು ಬೆಳಗುಂಬದ ಘಟಕಕ್ಕೆ ಕೂಡಲೇ ಗಮನಹರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಎಸ್. ಬಸವರಾಜ್, ನೂತನ ಪುರಸಭಾ ನಾಮಕರಣ ಸದಸ್ಯರಾದ ಎ.ಎಲ್. ನಾರಾಯಣ್, ಎ.ಬಿ. ಶಂಕರಯ್ಯ, ಮಾಜಿ ಪುರಸಭಾ ಅಧ್ಯಕ್ಷ ಕೆ.ಎನ್. ದುರ್ಗಪ್ಪಶೆಟ್ಟಿ, ಬಿಜೆಪಿ ಮುಖಡರಾದ ಕೆ.ಎಂ. ರುದ್ರಮುನಿಸ್ವಾಮಿ, ಶಂಕರ್ ಹಾಗೂ ಕಾರ್ಯಕರ್ತರು ಅಣ್ಣೇನಹಳ್ಳಿ ಗೇಟ್ ಬಳಿ ಸಚಿವರನ್ನು ಸ್ವಾಗತಿಸಿ ಬೀಳ್ಕೊಟ್ಟರು.