ಇಬ್ಬರು ಕನ್ನಡದ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ

ಗುಲಾಬಿ ಟಾಕೀಸ್‌ನ ಅಭಿನಯಕ್ಕಾಗಿ ಈ ಬಾರಿಯ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಉಮಾಶ್ರೀ ಅವರಿಗೆ ಸಂದಿದೆ. ರಂಗಭೂಮಿಯನ್ನು ಚಿಮ್ಮು ಹಲಗೆಯನ್ನಾಗಿಸಿ ಕೊಂಡು ಚಿತ್ರರಂಗಕ್ಕೆ ಬಂದವರು ಉಮಾಶ್ರೀ. ಅವರು ಜೋ ಕುಮಾರಸ್ವಾಮಿ ನಾಟಕದ ಅಭಿನಯಕ್ಕಾಗಿ ಸಾಕಷ್ಟು ಬಾರಿ ಹಾಸನಕ್ಕೆ ಬಂದಿದ್ದರು. ಅವರ ಪ್ರತಿಭೆಯನ್ನು ನಿಜಕ್ಕೂ ಹೊರತಂದ ನಾಟಕ ಎಂದರೆ ದೇವನೂರು ಮಹಾದೇವರ ಸಣ್ಣ ಕಥೆಯನ್ನಾಧರಿಸಿದ ಒಡಲಾಳ. ತಮ್ಮ ಯೌವನದ ದಿನಗಳಲ್ಲಿ ಎಪ್ಪತ್ತು ವರ್ಷದ ಮುದುಕಿಯಾಗಿ, ಕಳೆದು ಹೋದ ಕೋಳಿಯನ್ನರಸುತ್ತಾ ಹೊರಡುವ ಸಾಕವ್ವನ ಪಾತ್ರ ರಂಗಪ್ರಿಯರಿಗೆ. ವಿಮರ್ಶಕರಿಗೆ ಅಪಾರ ಮೆಚ್ಚುಗೆಯಾಗಿತ್ತು. ಒಡೆದ ಕನ್ನಡಕ, ಎಲೆ, ಅಡಿಕೆ ಜಗಿಯುವ ಬಾಯಿ, ರವಿಕೆಯನ್ನೆ ಧರಿಸದೇ ಅಭಿನಯಿಸಿದ್ದ ಅವರನ್ನು ಉಮಾಶ್ರೀ ಎಂದು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ಇಂಥ ಪಾತ್ರವನ್ನು ರಂಗದ ಮೇಲೆ ಸೃಜಿಸಿದ ಸಿ.ಜಿ.ಕೆ. (ಸಿ.ಜಿ. ಕೃಷ್ಣಸ್ವಾಮಿ) ಯವರಿಗೂ ಇದರ ಯಶಸ್ಸಿನಲ್ಲಿ ಪಾಲಿದೆ. ಇದೇ ರೀತಿಯ ಪಾತ್ರವನ್ನು ಪುಟ್ನಂಜ ಸಿನಿಮಾದಲ್ಲಿ ಮಾಡಿದಾಗ ಪ್ರೇಕ್ಷಕ ಅವರನ್ನು ನೋಡುವ ಕ್ರಮವೇ ಬದಲಾಯಿತು. ಅದುವರೆವಿಗೂ ಎನ್‌.ಎಸ್‌. ರಾವ್‌, ದಿನೇಶ್‌, ದೊಡ್ಡಣ್ಣ, ಧಿರೇಂದ್ರ ಗೋಪಾಲ್‌ರಂತಹ ನಟರ ಜೊತೆ ದ್ವಂದ್ವಾರ್ಥ ಸಂಭಾಷಣೆಯ ಪಾತ್ರಗಳಲ್ಲಿ ಅಭಿನಯಿಸಿ (ಪೋಷಕ ನಟರಿಗೆ ಆಯ್ಕೆಯ ಅವಕಾಶ ಅಷ್ಟಿರುವುದಿಲ್ಲ) ಮುಂದಿನ ಬೆಂಚಿನ ಪ್ರೇಕ್ಷಕರಿಂದ ಶಿಳ್ಳು ಗಿಟ್ಟಿಸಿ ಅದೇ ರೀತಿಯ ಪಾತ್ರಕ್ಕೆ ಅವರು ಬ್ರಾಂಡಾಗಿಬಿಟ್ಟಿದ್ದರು. ಜನರು ನೋಡುವ ದೃಷ್ಠಿಕೋನ ಬದಲಾದದ್ದು ಪುಟ್ನಂಜ ಚಿತ್ರದ ನಂತರವೇ. ಅವರ ಅಭಿನಯದ ವೈವಿಧ್ಯತೆ, ಸಂಭಾಷಣೆಯ ಶೈಲಿಯ ಪರಿಚಯವಾದದ್ದು ಕುರಿಗಳು ಸಾರ್‌, ಕೋತಿಗಳು ಸಾರ್‌ ಮತ್ತು ಕತ್ತೆಗಳು ಸಾರ್‌ ಸರಣಿಯಲ್ಲಿ ಮಲೆಯಾಳಿ ಮಿಶ್ರಿತ ಕನ್ನಡ, ತಮಿಳು ಮಿಶ್ರಿತ ಕನ್ನಡ, ಹುಬ್ಬಳ್ಳಿ ಕನ್ನಡ, ಚಾಮರಾಜನಗರ ಕನ್ನಡ ಹೀಗೆ ಕೇವಲ ಅಭಿನಯ ಅಲ್ಲದೆ ಸಂಭಾಷಣಾ ಚಾತುರ್ಯ ದಿಂದಲೂ ಇತರೆ ಪಾತ್ರಗಳಿಗಿಂತ ಹೆಚ್ಚೇ ರಂಜಿಸಿದ್ದಾರೆ. ಈಗ ಉಮಾಶ್ರೀಗೆ ಈ ಪ್ರಶಸ್ತಿ ! ರಂಗಭೂಮಿಯ ಸುದೀರ್ಘ ಅನುಭವ ಉಮಾಶ್ರೀ ಯವರಿಗೆ ಪ್ರಶಸ್ತಿ ದಕ್ಕಿದ್ದು ರಂಗಾಸಕ್ತರೆಲ್ಲರೂ ಸಂತಸ ಪಡುವ ವಿಷಯವಾಗಿದೆ.   ಎತ್ತರದ ಸದೃಢ ಮೈಕಟ್ಟಿನ ಆಕರ್ಷಕ ವ್ಯಕ್ತಿತ್ವದ ಪ್ರಕಾಶ್‌ರೈ (ರಾಜ್‌) ಎಂದರೆ ತಕ್ಷಣ ನೆನಪಾಗುವುದು ಅವರ ನಾಗಮಂಡಲ ಚಿತ್ರದಲ್ಲಿನ ಸದಾ ಕಾಡುವ ಚುರುಕು ಅಭಿನಯದ ಪಾತ್ರ. ಪಾತ್ರ ಎನ್ನುವುದಕ್ಕಿಂತ, ತಾವೇ ಪಾತ್ರವಾಗುವ ತನ್ಮಯತೆ ಪ್ರಕಾಶ್‌ರೈ ಅವರದು. ಆದರೇಕೊ ಕನ್ನಡ ಚಿತ್ರರಂಗಕ್ಕೆ ಈ ಪ್ರತಿಭೆ ಸೂಕ್ತವಾಗಿ ಬಳಕೆಯಾಗಲೇ ಇಲ್ಲ. ಆಕರ್ಷಕ ಮೈಕಟ್ಟು, ಸ್ವಚ್ಛವಾದ ಭಾಷೆಯ ಬಳಕೆ, ಪಾತ್ರ ಚಿಕ್ಕದಿರಲಿ ದೊಡ್ಡದಿರಲಿ ತೊಡಗಿಸಿಕೊಂಡು ಅಭಿನಯಿಸುವ ಅಪರೂಪದ ಕಲೆಗಾರಿಕೆ ಇದ್ದಾಗ್ಯೂ ಕನ್ನಡ ಚಿತ್ರರಂಗದಲ್ಲಿ ಸೂಕ್ತ ಮನ್ನಣೆ ದೊರೆಯದೆ ಅನಿಲ್‌ ಕಪೂರ್‌, ರಜನಿಕಾಂತ್‌ ರ ಸಾಲಿನಲ್ಲಿ ಸೇರಿಹೋದರು. ಪ್ರಕಾಶ್‌ ರೈ ಅವರ ಪ್ರತಿಭೆಯನ್ನು ಗುರುತಿಸಿ ಬಳಸಿಕೊಂಡಿದ್ದು ನೆರೆಯ ತೆಲುಗು, ತಮಿಳು ಮಲೆಯಾಳಂ ಚಿತ್ರರಂಗ. ನಾಯಕ, ಖಳನಾಯಕ, ಪೋಷಕ ನಟ ಹೀಗೆ ಎಲ್ಲಾ ಪಾತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದು ಇವರ ಹೆಚ್ಚುಗಾರಿಕೆ. ನಟನೆಗಷ್ಟೆ ಸೀಮಿತವಾಗದೆ ಚಿತ್ರ ನಿರ್ದೇಶನ, ನಿರ್ಮಾಣ ಕಾರ್ಯಗಳಲ್ಲೂ ತೊಡಗಿಸಿಕೊಂಡವರು. ಗುಡ್ಡದಭೂತ, ಬಿಸಿಲುಕುದುರೆ ಧಾರಾವಾಹಿ ಗಳಲ್ಲೂ ನಟಿಸಿರುವ ಪ್ರಕಾಶ್‌ ರೈ ಕನ್ನಡದಲ್ಲಿ ರಾಮಾಚಾರಿ, ನಿಷ್ಕರ್ಷ, ಲಾಕಪ್‌ಡೆತ್‌ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ವಿಶಿಷ್ಟ ಸಂಭಾಷಣೆ ನಟನಾ ಶೈಲಿಗೆ ಹೆಸರಾದ ಪ್ರಕಾಶ್‌ ರೈ ಚಿತ್ರರಂಗದಲ್ಲಿ ಗುರುತಿಸಿಕೊಂಡದ್ದು ಹರಕೆಯ ಕುರಿ ಚಿತ್ರದ ಮೂಲಕ. ತಾವು ಅಭಿನಯಿಸುವ ಪಾತ್ರಕ್ಕೆ ಗೌರವ ತಂದುಕೊಡುವ ಪ್ರಕಾಶ್‌ರೈ, ಭಾರತೀಯ ಚಿತ್ರರಂಗದಲ್ಲೇ ಖಳನಾಯಕನ ಪಾತ್ರಕ್ಕೆ ಹೇಳಿಮಾಡಿಸಿದಂತಹ ಅಭಿನಯಕ್ಕೆ ಹೆಸರಾದವರಲ್ಲಿ ಒಬ್ಬರು. ತೆಲುಗು ಚಿತ್ರ ಒಕ್ಕುಡು ಇದಕ್ಕೊಂದು ಅತ್ಯುತ್ತಮ ನಿದರ್ಶನ. ಅದೇ ಚಿತ್ರ ತಮಿಳಿನಲ್ಲಿ ಗಿಲ್ಲಿ, ಕನ್ನಡದಲ್ಲಿ ಅಜಯ್‌ ಹೆಸರಿನಿಂದ ರಿಮೇಕ್‌ಗೊಂಡು ಇಲ್ಲೂ ಪ್ರಕಾಶ್‌ ರೈ ಅವರೆ ಅಭಿನಯಿಸಿದ್ದು ವಿಶೇಷ. ಪಿ. ಶೇಷಾದ್ರಿ ನಿರ್ದೇಶನದಲ್ಲಿ ಅತಿಥಿ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದರೂ ಪ್ರಕಾಶ್‌ರೈ ಸಂಭಾವನೆ ಪಡೆದಿದ್ದು ೧ ರೂ. ಮಾತ್ರ. ೨೦೦೭ ರಲ್ಲಿ ನಿರ್ಮಾಣವಾದ ಮೋಜಿ ಸಿನಿಮಾದಲ್ಲಿ ನಕರಾತ್ಮಕ ಪಾತ್ರದಲ್ಲಿ ಅಭಿನಯಿಸಿದ ಪ್ರಕಾಶ್‌ ರೈ ಅಲ್ಲೂ ಹಾಸ್ಯವನ್ನು ಮೇಳೈಸಿಕೊಂಡು ಅಭಿನಯಿಸಿದ್ದರಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ವರ್ಷ ಇವರ ನಟನೆಯ ನಾಲ್ಕು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿವೆ. ೧೯೯೮ ರಲ್ಲಿ ತಮಿಳಿನ ಇರುವರ್‌ ಸಿನಿಮಾದಲ್ಲಿನ ಪೋಷಕ ಪಾತ್ರದ ಅಭಿನಯಕ್ಕಾಗಿ, ೨೦೦೩ ವಿಶೇಷ ಜ್ಯೂರಿ ಅವಾರ್ಡ್‌ಗಳನ್ನು ಪಡೆದಿರುವ ಪ್ರಕಾಶ್‌ರೈ ಇದೀಗ ೨೦೦೭-೦೯ ನೇ ಸಾಲಿನ ತಮಿಳು ಚಿತ್ರ ಕಾಂಜಿವರಂದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಲವು ತಮಿಳು ಸಿನಿಮಾಗಳನ್ನು ನಿರ್ಮಿಸಿದ್ದು, ಅವು ಪ್ರೇಕ್ಷಕರ ಮನಗೆದ್ದು, ಗಲ್ಲಾ ಪೆಟ್ಟಿಗೆಯನ್ನು ಭರ್ತಿಮಾಡಿವೆ. ಬಹುಪಾಲು ಇವರ ನಿರ್ಮಾಣದ ಚಿತ್ರಗಳು ಕೌಟುಂಬಿಕ ಚಿತ್ರಗಳಾಗಿದ್ದು ದಯಾ ಸಿನಿಮಾವನ್ನು ನಿರ್ಮಿಸಿ, ನಟಿಸಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಪಡೆದಿರುವ ಪ್ರಕಾಶ್‌ರೈ ನಿರ್ಮಿಸುವ ಸಿನಿಮಾಗಳು ವಿಶೇಷ ಕಥಾವಸ್ತುಗಳನ್ನೊಳಗೊಂಡಿರುತ್ತವೆ. ಒಟ್ಟಿನಲ್ಲಿ ಕರ್ನಾಟಕದ ಮಂಗಳೂರಿನ ಈ ಪ್ರತಿಭಾ ಸಂಪನ್ನ, ಸುಂದರ ನಟನಿಗೆ ೦೭-೦೮ ಸಾಲಿನ ಅತ್ಯುತ್ತಮ ನಟ ನಾಗಿ ರಾಷ್ಟ್ರ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯ. ಜೊತೆಗೆ ಇಲ್ಲಿ ಸಲ್ಲದ ಪ್ರತಿಭೆ ಮತ್ತೆಲ್ಲಾ ಕಡೆಯೂ ಸಲ್ಲುತ್ತಿರು ವುದು ಕನ್ನಡಿಗರಾದ ನಮಗೆ ನಾಚಿಕೆ ತರುವಂತ ಹದ್ದು ಕೂಡ ಎಂಬುದರಲ್ಲಿ ಎರಡು ಮಾತಿಲ್ಲ. – ಸುಪ್ರಜ

No Comments to “ಇಬ್ಬರು ಕನ್ನಡದ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ”

add a comment.

Leave a Reply

You must be logged in to post a comment.