ಗೊಬ್ಬರ ಅಪಹರಿಸಿದ್ದ ಲಾರಿ ಮಾಲೀಕ-ಚಾಲಕ ಸೆರೆ

ಹಾಸನ: ೩,೮೭,೧೨೪ ರೂ. ಬೆಲೆಯ ೫೦ ಕೆ.ಜಿ.ಯ ಒಟ್ಟು ೩೨೦ ಚೀಲ ರಸಗೊಬ್ಬರವನ್ನು ಸಂಬಂಧಪಟ್ಟವರಿಗೆ ಸರಬರಾಜು ಮಾಡದೆ ಅಪಹರಿಸಿದ್ದ ಲಾರಿ ಮಾಲೀಕ ಹಾಗೂ ಚಾಲಕನನ್ನು ನಗರದ ಬಡಾವಣೆ ಪೊಲೀಸರು ಬಂಧಿಸಿ, ಗೊಬ್ಬರ ಹಾಗೂ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕು ಅಣ್ಣೀಗೇರಿಯ ಲಾರಿ ಮಾಲೀಕ ಗುರಪ್ಪ ಕಲ್ಲೂರ್‌ (೨೪) ಹಾಗೂ ಅದೇ ಊರಿನ ಚಾಲಕ ಮದಾರ್‌ ಸಾಬ್‌(೨೪) ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಜೂನ್‌ ೧೮ರಂದು ಹೆಚ್‌.ಎನ್‌. ಪುರ ರಸ್ತೆಯ ಹೊಸಕೊಪ್ಪಲು ಬಳಿ ಚಂದ್ರಣ್ಣ ಎಂಬುವವರು ಸದರಿ ಗೊಬ್ಬರ ವನ್ನು ಆರೋಪಿಗಳಿಗೆ ನೀಡಿ, ಗದಗ್‌ ಜಿಲ್ಲೆಯ ಜಮಖಂಡಿಯ ಮಹಾಲಕ್ಷ್ಮೀ ಟ್ರೇಡಿಂಗ್‌ ಕಂಪೆನಿಗೆ ತಲುಪಿಸುವಂತೆ ತಿಳಿಸಿದ್ದರು. ಆದರೆ ಆರೋಪಿಗಳು ಅದನ್ನು ಅಪಹರಿಸಿದ್ದರು. ಪ್ರಕರಣ ದಾಖಲಿಸಿದ ಬಡಾವಣೆ ಪೊಲೀಸರು, ವೃತ್ತ ನಿರೀಕ್ಷಕ ಬಿ.ಆರ್‌. ವೇಣು ಗೋಪಾಲ್‌ ನೇತೃತ್ವದಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾದರು. ಈ ಆರೋಪಿಗಳು ಮುನಿರಾಬಾದ್‌ ಹಾಗೂ ಬಳ್ಳಾರಿ ಜಿಲ್ಲೆ ಮರಿಯಮ್ಮನ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ತಲಾ ೧ ಲೋಡ್‌ ಕಬ್ಬಿಣವನ್ನು ಅಪ ಹರಿಸಿ, ಶಿಕ್ಷೆಗೂ ಗುರಿಯಾಗಿದ್ದರು. ಬಡಾವಣೆ ಪೊಲೀಸ್‌ ಸಬ್‌ ಇನ್ಸ್‌ ಪೆಕ್ಟರ್‌ ನಾಗರಾಜ್‌ ಹೊನ್ನೂರು ಹಾಗೂ ಅವರ ಸಿಬ್ಬಂದಿ ಕೂಡ ತನಿಖೆಯಲ್ಲಿ ಪಾಲ್ಗೊಂಡಿದ್ದರು.

No Comments to “ಗೊಬ್ಬರ ಅಪಹರಿಸಿದ್ದ ಲಾರಿ ಮಾಲೀಕ-ಚಾಲಕ ಸೆರೆ”

add a comment.

Leave a Reply

You must be logged in to post a comment.